*ಸಿದ್ದಾಪುರ, ಆ. 16: ವಾಲ್ನೂರು-ತ್ಯಾಗತ್ತೂರು ಗ್ರಾಮದ ಮಳೆ ಹಾನಿ ಪ್ರದೇಶಗಳಿಗೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ನಿರಾಶ್ರಿತರಾಗಿ ಸ್ಥಳೀಯ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವವರಿಗೆ ತಕ್ಷಣದ ಪರಿಹಾರವಾಗಿ 10 ಸಾವಿರ ರೂಪಾಯಿಗಳ ಚೆಕ್ ವಿತರಿಸಿದರು. ಜೊತೆಗೆ 20 ದಿನಕ್ಕಾಗುವ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಿಸಿದರು. ಅತಿವೃಷ್ಟಿಯಿಂದ ಸಂಪೂರ್ಣ ಮನೆ ಕಳೆದುಕೊಂಡವರಿಗೆ ರೂ. 95 ಸಾವಿರ, ಭಾಗಶಃ ಮನೆ ಕಳೆದುಕೊಂಡವರಿಗೆ ನಷ್ಟ ಅಂದಾಜಿಸಿ 60 ಸಾವಿರದವರೆಗೆ ನಗದು ರೂಪದಲ್ಲಿ ಪರಿಹಾರ ನೀಡಲಾಗುವದು ಎಂದು ತಿಳಿಸಿದರು. ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್, ಕಂದಾಯ ಅಧಿಕಾರಿ ಮಧುಸೂದನ್, ಗ್ರಾಮ ಲೆಕ್ಕಿಗ ಅನೂಷ, ಗ್ರಾಮ ಪಂಚಾಯಿತಿ ಸದಸ್ಯ ಭುವನೇಂದ್ರ, ಆರ್ಎಂಸಿ ಉಪಾಧ್ಯಕ್ಷ ಹಾಗೂ ಸ್ಥಳೀಯ ಕಾಫಿ ಬೆಳೆಗಾರ ಚೇಂದಂಡ ಜತ್ತ ವಿಜಯ, ಸದಸ್ಯೆ ಕಮಲಮ್ಮ ಉಪಸ್ಥಿತರಿದ್ದರು.