ವೀರಾಜಪೇಟೆ, ಆ.16: ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆ ಪೊನ್ನಂಪೇಟೆಯ ಕಾಟ್ರಕೊಲ್ಲಿಯ ನಿವಾಸಿ, ಅಭಿಷೇಕ್ ಅಲಿಯಾಸ್ ಅಭಿ (22) ಎಂಬಾತನಿಗೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿವಿಧ ಪೋಕ್ಸೊ ಕಾಯ್ದೆ ಸೇರಿದಂತೆ ವಿವಿಧ ಕಲಂನಡಿ ದಂಡ ಸಹಿತ 43 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಭಾ.ದ.ಸಂ, ಕಲಂ 376 ಕಾಯ್ದೆಯಡಿಯಲ್ಲಿ 20ವರ್ಷ ಸಜೆ, ರೂ 30,000 ದಂಡ, ಕಲಂ 6ರ ಪೊಕ್ಸೋ ಕಾಯ್ದೆಯಡಿಯಲ್ಲಿ 20ವರ್ಷಗಳ ಸಜೆ ರೂ.20,000 ದಂಡ, ಕಲಂ 363 ರ ಭಾ.ದಂ.ಸಂ ಅಡಿಯಲ್ಲಿ 3ವರ್ಷ ಸಜೆ ಹಾಗೂ ರೂ 5000 ದಂಡ ಪಾವತಿಸುವಂತೆ ತೀರ್ಪು ನೀಡಿದ್ದಾರೆ.ಆರೋಪಿ ಅಭಿಷೇಕ್ ತಾ.26-02-2018 ಹಾಗೂ 28-02-2018 ರಂದು ಎರಡು ಬಾರಿ ಈ ಕೃತ್ಯವೆಸಗಿದ್ದಾನೆಂದು ಆರೋಪಿಸಿ ಗೋಣಿಕೊಪ್ಪ ವೃತ್ತ ನಿರೀಕ್ಷಕರು ಪ್ರಕರಣದ ತನಿಖೆ ಪೊರೈಸಿ ವೀರಾಜಪೇಟೆ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಕಲಂ 376 2(ಐ) ಪ್ರಕಾರ ರೂ 30,000 ದಂಡ ಪಾವತಿಸದಿದ್ದರೆ 2ವರ್ಷಗಳ ಸಜೆ, ಕಲಂ 6ರ

(ಮೊದಲ ಪುಟದಿಂದ) ಪೊಕ್ಸೋ ಕಾಯ್ದೆ ಅಡಿ ರೂ 20,000 ದಂಡ- ಪಾವತಿಸದಿದ್ದರೆ 1 ವರ್ಷಗಳ ಸಜೆ, ಕಲಂ 363 ರ ಅಡಿಯಲ್ಲಿ ರೂ 5000 ದಂಡ ಪಾವತಿಸದಿದ್ದರೆ, ಆರು ತಿಂಗಳ ಸಜೆ ಅನುಭವಿಸಬೇಕು. ದಂಡ ಪಾವತಿಯಲ್ಲಿ ಬರುವ ಹಣದಲ್ಲಿ ರೂ 50,000ವನ್ನು ಬಾಧಿತಳಿಗೆ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರದ ಪರ ವಿಶೇಷ ಅಭಿಯೋಜಕರಾದ ಡಿ.ನಾರಾಯಣ ವಾದಿಸಿದರು.