ಮಡಿಕೇರಿ, ಆ. 14: ‘ಅಯ್ಯೋ... ಮಳೆಯಿಲ್ಲ... ನಾಟಿ ಮಾಡಲು ನೀರಿಲ್ಲ, ಕಳೆದ ವರ್ಷ ಮಳೆ ಜಾಸ್ತಿಯಾಯಿತು, ಈ ವರ್ಷ ಮಳೆಯೇ ಇಲ್ಲ, ಹೀಗಾದ್ರೇ ಕುಡಿಯುವ ನೀರಿಗೂ ಹಾಹಾಕಾರ ಪಡಬೇಕಾದೀತು’.
ಈ ಮೇಲಿನ ಮಾತುಗಳು ಕೇಳಿಬಂದಿದ್ದು, ವಾರದ ಹಿಂದೆ ನಮ್ಮ ಜಿಲ್ಲೆಯ ಜನತೆಯ ಬಾಯಿಯಲ್ಲಿ... ಕೇವಲ ಒಂದೇ ಒಂದು ವಾರದಲ್ಲಿ ಕೊಡಗಿನಲ್ಲಿ ಮಹಾಮಳೆ ಅಪ್ಪಳಿಸಿ ಇಡೀ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಪ್ರವಾಹಕ್ಕೆ ಸಿಲುಕಿ ಹಲವರ ಮನೆಗಳು ನೀರಿನಲ್ಲಿ ಮುಳುಗಿ ಸಂತ್ರಸ್ತರಾಗಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಕಷ್ಟಪಟ್ಟು ದುಡಿದು ಕಟ್ಟಿದ ಮನೆಗಳು ನೀರಿನಲ್ಲಿ ಮುಳುಗಿ, ಮುಂದಿನ ದಾರಿ ಯಾವದಯ್ಯಾ?.... ಎನ್ನುತ್ತಿದ್ದಾರೆ ಸಂತ್ರಸ್ತರು. ಸಂತ್ರಸ್ತರಾದವರಲ್ಲಿ ಹಲವರಿಗೆ ತಮ್ಮ ಅಳಲನ್ನು ಯಾರಿಗೂ ಹೇಳಿಕೊಳ್ಳ ಲಾಗದೇ, ಅಸಹಾಯಕರಾಗಿ ನಿಂತಿದ್ದಾರೆ.
‘ಶಕ್ತಿ’ ಪರವಾಗಿ ಮಹಾಮಳೆಯ ಪ್ರವಾಹಕ್ಕೆ ಸಿಲುಕಿದ ಕೊಂಡಂಗೇರಿ ಪ್ರದೇಶಕ್ಕ ಭೇಟಿ ನೀಡಿದ್ದಾಗ ಅಲ್ಲಿನ ಸ್ನೇಹಿತ ಅಬ್ದುರಹಮಾನ್‍ನೊಂದಿಗೆ ಪರಿಸ್ಥಿತಿಯ ನೈಜಾಂಶವನ್ನು ಪಡೆದುಕೊಂಡು, ನಂತರ ಶಾಲೆ ಹಾಗೂ ಮಸೀದಿಯಲ್ಲಿರುವ ನಿರಾಶ್ರಿತರ ಕೇಂದ್ರÀಕ್ಕೆ ಭೇಟಿ ನೀಡಿ ಸಂತ್ರಸ್ತರ ಸದ್ಯದ ಪರಿಸ್ಥಿತಿ ಬಗ್ಗೆ ಒಂದಷ್ಟು ಮಾಹಿತಿ ನೋಡಿ ತಿಳಿದೆ. ಪ್ರವಾಹಕ್ಕೆ ಸಿಲುಕಿ ಮನೆಯನ್ನು ಕಳೆದುಕೊಂಡವರನ್ನು ನೋಡಿದಾಗ ಕಣ್ಣಲ್ಲಿ ಒಂದಷ್ಟು ನೀರು ಬಂತು. ಮಸೀದಿಯಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ, ಒಬ್ಬ ಮದರಸ ಅಧ್ಯಾಪಕ ಕಣ್ಣೀರಿಡುತ್ತಾ ಕುಳಿತ್ತಿದ್ದನ್ನು ನೋಡಿ, ಆತನ ಬಳಿ ಓಡಿ ಹೋಗಿ, ಸರ್ ಏನಾಯ್ತು ಸರ್, ಯಾಕೆ ಅಳುತ್ತಿದ್ದೀರಿ ಎಂದು? ಕೇಳಿದಾಗ ಆತ ಮತ್ತಷ್ಟು ಕಣ್ಣೀರಿಡುತ್ತಾ, ಸರ್ ನನ್ನ ಹೆಸರು ಕೆ.ಯು ಅಬ್ಬಾಸ್ ನಾನು ಕೊಂಡಂಗೇರಿ ಗ್ರಾಮದ ನಿವಾಸಿಯಾಗಿದ್ದಾನೆ. ಕಷ್ಟಪಟ್ಟು ಕಳೆದ ಹಲವು ವರ್ಷಗಳಿಂದ ದುಡಿದು ಕಟ್ಟಿದ ನನ್ನ ಆಸ್ತಿ ಎನ್ನಲು ಇದ್ದ ಒಂದು ಮನೆ ನೀರುಪಾಲಾಗಿದೆ.
ನನಗೆ ಆರು ಮಕ್ಕಳು ಸರ್, ಐದು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗು ಸರ್. ಮೊದಲ ಮಗಳ ಮದುವೆ ಸಾಲ ಮಾಡಿ ಮಾಡಿಕೊಟ್ಟೆ. ಆ ಮದುವೆಗೆ ಮಾಡಿದ ಸಾಲ ಇನ್ನೂ ಕೂಡ ತೀರಿಸಲು? ಸಾಧ್ಯವಾಗಿಲ್ಲ.
ಎರಡನೇ ಮಗಳ ಮದುವೆ ಇದೇ ಆಗಸ್ಟ್ 15ರಂದು ನಡೆಸಲು ತೀರ್ಮಾನಿಸಿದ್ದೆ, ಮತ್ತೆ 1 ಲಕ್ಷಕ್ಕೂ ಅಧಿಕ ರೂ. ಸಾಲ ಮಾಡಿ, ಮನೆಯ ಒಳಗಿನ ಸ್ವಲ್ಪ ಕೆಲಸ ಹಾಗೂ ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದ್ದ ಎರಡೇ ದಿನದಲ್ಲಿ ಮನೆ ಮುಳುಗಡೆಯಾಗಿದೆ.
ಮಗಳಿಗೆ ಮದುವೆಗೆ ಬೇಕಾದ ಬಟ್ಟೆಗಳನ್ನು ಖರೀದಿ ಮಾಡಿ ಮನೆಯ ಗೋಡ್ರೇಜ್ ಒಳಗೆ ಇಟ್ಟಿದ್ದೆ ಸರ್ ಹಾಗೂ ಒಂದಷ್ಟು ಹಣ ಕೂಡಿಟ್ಟಿದ್ದೆ ಎಲ್ಲವೂ ಮಳೆಯಲ್ಲಿ ಮುಳುಗಡೆಯಾಗಿದೆ.
ಮಗಳ ಮದುವೆನಾ ಹೇಗೆ ಮಾಡಲಿ ಸರ್. ದಯವಿಟ್ಟು ಸಹಾಯ ಮಾಡಿ ಸರ್ ಎಂದು ಭಾವುಕರಾದರು. ಹಿಂತಿರುಗಿ ಬರುವಾಗ ಸರ್ ನನ್ನ ವಿಷಯ ಮರೆಯಬೇಡಿ ಎಂದು ಕೈ ಹಿಡಿದು ಬೇಡಿಕೊಂಡರು.ಕೂಡಿಟ್ಟಿದ್ದ ಒಂದಷ್ಟು ಹಣ ನೀರು ಪಾಲಾಗಿದೆ, ಸಾಲ ಮಾಡಿ ಮದುವೆಗೆ ಖರೀದಿಸಿದ ವಸ್ತುಗಳು ಪ್ರವಾಹಕ್ಕೆ ಕೊಚ್ಚಿಹೋಗಿದೆ. ಜಿಲ್ಲಾಡಳಿತ, ಸರ್ಕಾರ, ಜಿಲ್ಲೆಯ ದಾನಿಗಳು ಕೈಜೋಡಿಸಿ ಅಬ್ಬಾಸ್ ಅವರ ಹೆಣ್ಣು ಮಗುವಿನ ಮದುವೆಗೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆಯಬೇಕಾಗಿದೆ.
-ಕೆ.ಎಂ. ಇಸ್ಮಾಯಿಲ್ ಕಂಡಕರೆ