ಪೊನ್ನಂಪೇಟೆ, ಆ. 14: ಪೊನ್ನಂಪೇಟೆ ಭಾಗದಲ್ಲಿ ಇತ್ತೀಚೆಗೆ ಎಡೆಬಿಡದೆ ಸುರಿದ ಧಾರಾಕಾರ ಮಳೆ ಕಳೆದೆರಡು ದಿನಗಳಿಂದ ಬಿಡುವು ನೀಡಿದೆ. ಆದರೆ ವರುಣನ ಆರ್ಭಟಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ ನಾಟಿ ಮಾಡಿದ್ದ ಕೃಷಿಗದ್ದೆಗಳು ನೀರಿನಲ್ಲಿ ಕೊಚ್ಚಿಹೋಗಿವೆ, ನಾಟಿ ಗದ್ದೆಯ ತುಂಬೆಲ್ಲ ಮರಳು ತುಂಬಿ ಹೋಗಿದ್ದು ಹಚ್ಚ ಹಸಿರಿನಿಂದ ಕಂಗೊಳಿಸಿ ರೈತನ ತುತ್ತಿನ ಚೀಲ ತುಂಬಬೇಕಾಗಿದ್ದ ಗದ್ದೆಗಳು ಮರುಭೂಮಿಯಂತೆ ಗೋಚರಿಸುತ್ತಿವೆ. ಭತ್ತದ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಅನ್ನದಾತರು ದಿಕ್ಕುತೋಚದೆ ಕಂಗಾಲಾಗಿದ್ದಾರೆ.

ಬಲ್ಯಮಂಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದ ಮುಂಡುಮಾಡ ಪಿ. ಚಿಣ್ಣಪ್ಪ (ಮನು) ಎಂಬವರಿಗೆ ಸೇರಿದ ಸುಮಾರು ಎರಡು ಎಕರೆ ನಾಟಿ ಮಾಡಿದ್ದ ಗದ್ದೆ, ತೋಡು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು ಗದ್ದೆಯ ತುಂಬೆಲ್ಲ ಮರಳು ತುಂಬಿಹೋಗಿವೆ. ಜಡಿ ಮಳೆಯ ಕಾರಣದಿಂದ ಕಾಫಿ ಪಸಲು ಕೂಡ ಉದುರುತ್ತಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಕೃಷಿ ಮಾಡಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಇವರು ಕಂಗಾಲಾಗಿದ್ದಾರೆ. ಇದೇ ಗ್ರಾಮದ ರೈತ ಮುಂಡುಮಾಡ ಟಿ. ಬೋಪಯ್ಯ (ಬೋಸು) ಎಂಬವರಿಗೆ ಸೇರಿದ 3 ಎಕರೆ ನಾಟಿ ಮಾಡಿದ್ದ ಗದ್ದೆಯೂ ಕೂಡ ತೋಡು ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಹಣ ಹಾಗೂ ಅಷ್ಟೂ ದಿನದ ಶ್ರಮ ಮಳೆಯಲ್ಲಿ ಕೊಚ್ಚಿಹೋಗಿರುವ ಕಾರಣ ಇವರಿಗೆ ದಿಕ್ಕೇ ತೋಚದಾಗಿದೆ.

ತೂಚಮಕೇರಿ ಗ್ರಾಮದ ವೆಳ್ಳಾಳರ ಕೆ. ವಸಂತ ಎಂಬವರಿಗೆ ಸೇರಿದ ಅಡಿಕೆ ಹಾಗೂ ಕಾಫಿ ತೋಟದ ಮಧ್ಯೆ ನೀರಿನ ರಭಸಕ್ಕೆ ಕಂದಕ ನಿರ್ಮಾಣವಾಗಿದ್ದು ಅಡಿಕೆ ಮರಗಳು ನೆಲಕ್ಕುರುಳಿವೆ, ಅಡಿಕೆ ಮರಕ್ಕೆ ಹಬ್ಬಿದ್ದ ಕರಿಮೆಣಸು ಬಳ್ಳಿ ಮಣ್ಣಪಾಲಾಗಿದ್ದು ಕಾಫಿ ಗಿಡಗಳು ಕೊಚ್ಚಿ ಹೋಗಿ ಸಾವಿರಾರು ರೂಪಾಯಿ ನಷ್ಟವಾಗಿದೆ.

ನಡಿಕೇರಿ ಗ್ರಾಮದ ಮಾಣಿಯಪ್ಪಂಡ ಬೆಳ್ಯಪ್ಪನವರು 7 ಎಕರೆ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದ್ದು ಸುಮಾರು 5 ಎಕರೆಗೂ ಹೆಚ್ಚು ನಾಟಿ ಗದ್ದೆ ಮಳೆಯ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಗದ್ದೆಯ ಏರಿಗಳು ಒಡೆದುಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಇದೇ ಗ್ರಾಮದ ಮತ್ತೊಬ್ಬ ರೈತ ಮಾಣಿಯಪ್ಪಂಡ ಗಣಪತಿ ಅವರ ಗದ್ದೆ ಕೂಡ ಹಾನಿಗೊಳಗಾಗಿದ್ದು, ಭತ್ತದ ಪೈರು ತುಂಬಿದ್ದ ಹಗೆ ಗದ್ದೆ ಕೊಚ್ಚಿಹೋಗಿದೆ. ಕೋಳೆರ ರಾಜ ಹಾಗೂ ಕೋಳೆರ ರವಿ ಎಂಬವರ ಗದ್ದೆ ಕೂಡ ಕೊಚ್ಚಿ ಹೋಗಿದೆ.

ಮುಗುಟಗೇರಿ ಗ್ರಾಮದ ಮಲ್ಚಿರ ಗೋಕುಲ ಎಂಬವರ ಗದ್ದೆಯ ಮೇಲೆ ಮಣ್ಣು ಕುಸಿದಿದ್ದು ಮಣ್ಣಿನಲ್ಲಿ ಮುಚ್ಚಿಹೋಗಿದೆ. ಮಲ್ಚಿರ ಪ್ರತಾಪ್ ಭೀಮಯ್ಯ ಎಂಬವರಿಗೆ ಸೇರಿದ ಹಗೆ ಗದ್ದೆ ಮಣ್ಣಿನಡಿ ಸಿಲುಕಿ ಹಾನಿಗೊಳಗಾಗಿದೆ. ಪೊನ್ನಂಪೇಟೆ ಹಾಗೂ ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹಳಷ್ಟು ಕೃಷಿ ಭೂಮಿಗಳು ಮಳೆಯ ರಭಸಕ್ಕೆ ಕೊಚ್ಚಿಹೋಗಿದ್ದು, ರೈತರು ಸರ್ಕಾರದಿಂದ ಪರಿಹಾರ ದೊರಕಬಹುದೆಂಬ ಆಶಾಭಾವನೆಯಲ್ಲಿದ್ದಾರೆ. ಚಿತ್ರ, ವರದಿ: ಚನ್ನನಾಯಕ