ನಾಪೋಕ್ಲು ಚಿತ್ರಣ
ನಾಪೋಕ್ಲು, ಆ. 15: ಕಳೆದ ಏಳೆಂಟು ದಶಕಗಳ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ನಾಪೋಕ್ಲು ಪಟ್ಟಣವನ್ನು ಆಕ್ರಮಿಸಿಕೊಂಡಿದ್ದ ಕಾವೇರಿ ನದಿ ಪ್ರವಾಹ ಇಳಿಮುಖಗೊಂಡಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ನಾಪೋಕ್ಲು-ಚೆರಿಯಪರಂಬು ಜಂಕ್ಷನ್ನ ಬಳಿ ರಸ್ತೆ ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಜಲಾವೃತಗೊಂಡಿದ್ದ ಗದ್ದೆಗಳಲ್ಲಿ ಪ್ರವಾಹದ ನೀರು ಇಳಿಮುಖಗೊಂಡಿದೆ. ಕೊಟ್ಟಮುಡಿಯ ಮರ್ಕಝ್ ಆವರಣ ಹಾಗೂ ಸರಕಾರಿ ಶಾಲೆ ಜಲಾವೃತಗೊಂಡಿತ್ತು. ಆದರೆ ಇದೀಗ ಪ್ರವಾಹ ಇಳಿಮುಖಗೊಂಡಿದ್ದು, ಕೊಟ್ಟಮುಡಿಯಲ್ಲಿ ಬಹುತೇಕ ಮನೆಗಳನ್ನು ಕಾವೇರಿ ಪ್ರವಾಹ ಆಪೋಶನ ಪಡೆದಿದ್ದು, ಚೆರಿಯಪರಂಬುವಿನಲ್ಲಿ ಬಹುತೇಕ ಮನೆಗಳು ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ಬಹುಮುಖ್ಯ ದಾಖಲಾತಿಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಪ್ರವಾಹದಲ್ಲಿ ಅಳಿದುಳಿದ ವಸ್ತುಗಳನ್ನು ಜನರು ಕೊಂಡೊಯ್ಯುತ್ತಿರುವ ಚಿತ್ರಣ ಚೆರಿಯಪರಂಬುವಿನಲ್ಲಿ ಕಂಡುಬರುತ್ತಿದೆ. ನಾಪೋಕ್ಲು ಜೂನಿಯರ್ ಕಾಲೇಜಿನಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರದಲ್ಲಿ ಕಂದಾಯ ಅಧಿಕಾರಿ ರಾಮಯ್ಯ ಸೇರಿದಂತೆ ಇತರ ಅಧಿಕಾರಿಗಳು ಸಂತ್ರಸ್ತರಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. ನಾಪೋಕ್ಲು ಜೂನಿಯರ್ ಕಾಲೇಜಿನಲ್ಲಿ ಇದೀಗ 55 ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಇನ್ನುಳಿದಂತೆ ಎಮ್ಮೆಮಾಡು, ಚೆಯ್ಯಂಡಾಣೆ, ಬಲ್ಲಮಾವಟಿಯಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕಂದಾಯ ಅಧಿಕಾರಿ ರಾಮಯ್ಯ ತಿಳಿಸಿದ್ದಾರೆ.
ಹಬ್ಬದೂಟ-ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಅಂಗವಾಗಿ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎ. ಇಸ್ಮಾಯಿಲ್ ಹಾಗೂ ತಂಡ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು.
ಕಳೆಗುಂದಿದ ಸಂತೆ: ಕಾವೇರಿ ಪ್ರವಾಹದಿಂದ ನಲುಗಿದ್ದ ನಾಪೋಕ್ಲುವಿನಲ್ಲಿ ನಿನ್ನೆ ನಡೆದ ಸಂತೆ ಕಳೆಗುಂದಿತ್ತು. ಎಂದಿನಂತೆ ಸಂತೆಗೆ ಆಗಮಿಸುತ್ತಿದ್ದ ವ್ಯಾಪಾರಿಗಳು ಪ್ರವಾಹ ಪರಿಸ್ಥಿತಿ ತಲೆದೋರಿದ್ದರಿಂದಾಗಿ ಕಡಿಮೆ ಸಂಖ್ಯೆಯಲ್ಲಿ ಸಂತೆಗೆ ಆಗಮಿಸಿದ್ದರು. ವಾರದ ಸಂತೆಗೆ ಅಗತ್ಯ ಸಾಮಗ್ರಿಗಳನ್ನು ಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುತ್ತಿದ್ದ ಜನರು ಪ್ರವಾಹದಿಂದಾಗಿ ವಿರಳ ಸಂಖ್ಯೆಯಲ್ಲಿ ಸಂತೆಗೆ ಆಗಮಿಸಿದ್ದು, ತರಕಾರಿ ಇನ್ನಿತರ ವಸ್ತುಗಳ ಬೆಲೆಗಳಲ್ಲೂ ಏರಿಕೆಯಾಗಿದೆ ಎಂದು ಗ್ರಾಹಕರು ದೂರಿದರು.
ಪರಿಹಾರ ವಿತರಣೆ: ನಾಪೋಕ್ಲು ಜೂನಿಯರ್ ಕಾಲೇಜಿನ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಅಮ್ಮತ್ತಿಯ ಸ್ನೇಹ ಬಳಗದ ಸದಸ್ಯರು ಸುಮಾರು ಐದು ಸಾವಿರ ರೂಪಾಯಿಗಳ ದಿನಸಿ ವಸ್ತುಗಳನ್ನು ವಿತರಿಸಿದರು.
- ದುಗ್ಗಳ