*ಸಿದ್ದಾಪುರ, ಆ. 15: ವಿಪರೀತ ಮಳೆಯಿಂದ ಕೃಷಿ ಭೂಮಿ ಸೇರಿದಂತೆ ಇತರ ಅಪಾರ ಪ್ರಮಾಣದ ನಷ್ಟಕ್ಕೆ ಒಳಗಾಗಿರುವ ವಾಲ್ನೂರು-ತ್ಯಾಗತ್ತೂರು ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುನಿಲ್ ಸುಬ್ರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ವಾಲ್ನೂರು-ತ್ಯಾಗತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯವಸ್ಥೆಗೊಳಿಸಿರುವ ತಾತ್ಕಾಲಿಕ ಪರಿಹಾರ ಕೇಂದ್ರಕ್ಕೆ ಬೇಟಿ ನೀಡಿ ನಿರಾಶ್ರಿತರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಇಲ್ಲಿನ ನಿರಾಶ್ರಿತ ಕೇಂದ್ರದಲ್ಲಿ ಮನೆ, ಆಸ್ತಿ ಕಳೆದುಕೊಂಡು ಸುಮಾರು 120 ಮಂದಿ ಆಶ್ರಯ ಪಡೆದಿದ್ದು ಇಲ್ಲಿ ಒದಗಿಸಲಾದ ಆಹಾರ ಮತ್ತು ನಿತ್ಯ ಬಳಕೆಯ ವಸ್ತುಗಳ ಬಗ್ಗೆ ಪರಿಶೀಲನೆ ನಡೆಸಿದರು. ವಾಲ್ನೂರು-ತ್ಯಾಗತ್ತೂರಿನಲ್ಲಿ ಸುರಿದ ಮಹಾ ಮಳೆಗೆ 400 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹಾಗೂ ಕಾಫಿ ತೋಟ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸ್ಥಳೀಯ ಬೆಳೆಗಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಶಾಸಕರ ಬಳಿ ಮನವಿ ಮಾಡಿಕೊಂಡರು. ಆರ್.ಎಂ.ಸಿ. ಉಪಾಧ್ಯಕ್ಷ ಹಾಗೂ ಸ್ಥಳೀಯ ಕಾಫಿ ಬೆಳೆಗಾರ ಚೇಂದಂಡ ಜತ್ತ ವಿಜಯ, ಗ್ರಾಮ ಪಂಚಾಯಿತಿ ಸದಸ್ಯ ಭುವನೇಂದ್ರ, ಕಾರ್ಯದರ್ಶಿ ರವಿ, ಶಾಲಾ ಮುಖ್ಯ ಶಿಕ್ಷಕ ಹೆಚ್.ಎಂ. ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ಕಮಲಮ್ಮ, ಗ್ರಾಮ ಲೆಕ್ಕಿಗೆ ಅನುಷ, ಪಂಚಾಯಿತಿ ಸಿಬ್ಬಂದಿ ಮಣಿ ಹಾಜರಿದ್ದರು.