ಮಡಿಕೇರಿ, ಆ. 14: ಕಾವೇರಿ ನದಿ ಪಾತ್ರದ ಅಲ್ಲಲ್ಲಿ ತಿಳಿಗೇಡಿಗಳು ಗೋವು ಸೇರಿದಂತೆ ಇತರ ಪ್ರಾಣಿಗಳ ಕೊಳೆತ ತ್ಯಾಜ್ಯವನ್ನು ಎಸೆಯುತ್ತಿರುವದು ಗೋಚರಿಸಿದೆ. ಒಂದೆಡೆ ನದಿಪಾತ್ರದ ರಕ್ಷಣೆಯೊಂದಿಗೆ ಜಲಮೂಲ ರಕ್ಷಣೆಯ ಕೂಗು ಕೇಳಿಬರತೊಡಗಿದೆ.

ಮತ್ತೊಂದೆಡೆ ಮಾನವನೊಂದಿಗೆ ಜೀವ ಸಂಕುಲಕ್ಕೆ ಅವಶ್ಯವಾಗಿರುವ; ಜೀವನದಿ ಕಾವೇರಿ ಸೇರಿದಂತೆ ಇತರ ಹೊಳೆ ನೀರನ್ನು ಮಲಿನ ಗೊಳಿಸುತ್ತಿರುವ ಮನುಷ್ಯಮಾತ್ರರ ಕುಹಕ ಕೃತ್ಯ ಹೇಸಿಗೆ ಹುಟ್ಟಿಸುತ್ತಿದೆ. ಕರಡ ಗ್ರಾ. ಪಂ. ವ್ಯಾಪ್ತಿಯಲ್ಲಿ ಇಂತಹ ದೃಶ್ಯ ಎದುರಾಗಿದ್ದು, ಗ್ರಾ.ಪಂ. ಪ್ರತಿನಿಧಿಗಳು ಪರಿಶೀಲನೆ ನಡೆಸಿದ್ದಾರೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.