ಸೋಮವಾರಪೇಟೆ, ಆ. 14: ಭಾರೀ ಗಾಳಿ-ಮಳೆಯಿಂದ ಹಾನಿಗೀಡಾದ ತಾಲೂಕಿನ ಗರ್ವಾಲೆ, ಶಾಂತಳ್ಳಿ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಗಳಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ಪಶು ಇಲಾಖೆಯ ವತಿಯಿಂದ ಗರ್ವಾಲೆ ಗ್ರಾಮದ ರೈತರಿಗೆ ಪಶು ಆಹಾರ ವಿತರಿಸಿದ ಶಾಸಕರು, ನಂತರ ಹರಗ ಗ್ರಾಮದಲ್ಲಿ ಬಿದ್ದಿರುವ ಎರಡು ಮನೆ ಹಾಗೂ ಬೀಳುವ ಹಂತದಲ್ಲಿರುವ ಮನೆಯನ್ನು ಪರಿಶೀಲನೆ ನಡೆಸಿದರು.

ಇದರೊಂದಿಗೆ ಬೆಟ್ಟದಳ್ಳಿ ಗ್ರಾಮದಲ್ಲಿ ಭಾರೀ ಗಾಳಿ ಮಳೆಗೆ ಬಿದ್ದಿರುವ ಮನೆ ಪರಿಶೀಲನೆ ಮಾಡಿದರು. ಕೊತ್ನಳ್ಳಿ ಗ್ರಾಮದಲ್ಲಿ ರೈತರ ಕೃಷಿ ಭೂಮಿಗೆ ಹೊಳೆ ನೀರು ನುಗ್ಗಿ ನಷ್ಟ ಹೊಂದಿದ್ದು, ಸರ್ಕಾರದಿಂದ ಅಗತ್ಯ ಪರಿಹಾರ ಕಲ್ಪಿಸುವಂತೆ ಕೃಷಿಕರು, ಶಾಸಕರಿಗೆ ಮನವಿ ಮಾಡಿದರು.

ಕುಡಿಗಾಣ ಗ್ರಾಮ ಸಂಪರ್ಕಿಸುವ ಚಿಕ್ಕುಂಡಿ ಸೇತುವೆ ಭಾರೀ ಮಳೆಗೆ ದುರಸ್ತಿಗೀಡಾಗಿದೆ. ರಸ್ತೆಯೂ ಕಿತ್ತುಬಂದಿರುವ ಹಿನ್ನೆಲೆ ಸಂಪರ್ಕಕ್ಕಾಗಿ ಬದಲಿ ಮಾರ್ಗದ ಬಗ್ಗೆಯೂ ಶಾಸಕರು ಪರಿಶೀಲಿಸಿದರು.

ಬೀದಳ್ಳಿ ಗ್ರಾಮದಲ್ಲಿ ಬರೆ ಕುಸಿದು ವಾಸದ ಮನೆಗೆ ಅಪಾಯ ಎದುರಾಗಿರುವದು, ಶಾಂತಳ್ಳಿ ವ್ಯಾಪ್ತಿಯಲ್ಲಿ ನಡೆದಿರುವ ಬೆಳೆ ನಷ್ಟದ ಪರಿಶೀಲನೆ ಹಾಗೂ ಗುಡ್ಡಳ್ಳಿಯಲ್ಲಿ 3ಏಕರೆ ಕಾಫಿ ತೋಟ ಕುಸಿದು ಬತ್ತದ ಜಮೀನಿನವರೆಗೆ ಬಂದಿರುವದನ್ನು ಪರಿಶೀಲನೆ ನಡೆಸಿ, ತುರ್ತು ದುರಸ್ತಿ ಕಾರ್ಯ ಕೈಗೊಳ್ಳುವದರೊಂದಿಗೆ, ವಾಸ್ತವಾಂಶವನ್ನು ಪರಿಗಣಿಸಿ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.