ಮಡಿಕೇರಿ, ಆ. 14: ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶ ಮಂಟಪಗಳನ್ನೊಳಗೊಂಡ ದಶ ಮಂಟಪ ಸಮಿತಿ ಸಭೆ ಇಂದು ಸಮಿತಿಯ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆಯಲ್ಲಿ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ರವಿಕುಮಾರ್ ಕಳೆದ ಬಾರಿ ಸರ್ಕಾರದಿಂದ ಘೋಷಣೆಯಾಗಿದ್ದ ಅನುದಾನ ಇನ್ನೂ ಬಾರದ ಕಾರಣ ಮಂಟಪ ಸಮಿತಿಗಳಿಗೆ ಸಮಸ್ಯೆ ಉಂಟಾಗಿದೆ ಎಂದರು. ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿ ಸಾಕಷ್ಟು ಪ್ರಯತ್ನಿಸಿದರೂ ಇನ್ನೂ ಕೂಡ ಅನುದಾನ ಸಿಕ್ಕಿಲ್ಲ ಎಂದು ವಿಷಾದಿಸಿದರು.

ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ ದಸರಾ ಅನುದಾನ ಬಿಡುಗಡೆ ಸಂಬಂಧ ಮಾಜಿ ಉಸ್ತುವಾರಿ ಸಚಿವರಾದ ಸಾರಾ ಮಹೇಶ್ ಅವರು ತನ್ನೊಂದಿಗೆ ದೂರವಾಣಿ ಮೂಲಕ ಇಂದು ಮಾತನಾಡಿದ್ದು ಅನುದಾನ ಆದಷ್ಟು ಶೀಘ್ರ ಕೈಸೇರುವ ವಿಶ್ವಾಸವಿದೆ ಎಂದರು. ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ದಸರಾ ಅನುದಾನ ಸಂಬಂಧ ಸಾಕಷ್ಟು ಬಾರಿ ಸಂಬಂಧಿಸಿದ ಇಲಾಖೆಯೊಂದಿಗೆ ಪತ್ರವ್ಯವಹಾರ ನಡೆಸಲಾಗಿದ್ದು, ಸದ್ಯದಲ್ಲಿಯೇ ಅನುದಾನ ಲಭಿಸಲಿದೆ. ಕಳೆದ ಬಾರಿಯ ಅನುದಾನವನ್ನು ಸರ್ಕಾರದಿಂದ ಪಡೆದು ಮಂಟಪಗಳಿಗೆ ಒದಗಿಸಿಕೊಡುವದು ತನ್ನ ಜವಾಬ್ದಾರಿ; ಇದರಲ್ಲಿ ಯಾವದೇ ಸಂಶಯ ಬೇಡ ಎಂದು ಭರವಸೆಯಿತ್ತರು. ವೇದಿಕೆಯಲ್ಲಿ ದಶಮಂಟಪ ಸಮಿತಿ ಕಾರ್ಯದರ್ಶಿ ರಕ್ಷಿತ್ ಇದ್ದರು.