ಮಡಿಕೇರಿ, ಆ. 14: ಪ್ರಸಕ್ತ ವರ್ಷದಲ್ಲಿ ಕಾಫಿ ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ನೈಋತ್ಯ ಮುಂಗಾರು ಮಳೆಯು ಜುಲೈ ತಿಂಗಳವರೆಗೂ ತೃಪ್ತಿಕರವಾಗಿರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ದಕ್ಷಿಣ ಕೊಡಗಿನ ಕಾಫಿ ಬೆಳೆಯುವ ಎಲ್ಲಾ ಪ್ರದೇಶಗಳಲ್ಲೂ ಸರಾಸರಿ ಶೇ. 50 ಕಡಿಮೆ ಮಳೆಯಾಗಿರುವದು ಕಂಡುಬಂದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಅದರಲ್ಲೂ, ದಕ್ಷಿಣ ಕೊಡಗಿನ ಎಲ್ಲಾ ಭಾಗಗಳಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಹವಾಮಾನ ವರದಿಯ ಪ್ರಕಾರ ಈ ಮಳೆಯು ಇನ್ನೂ ಕೆಲವು ದಿನಗಳು ಮುಂದುವರೆಯುವ ಸಾಧ್ಯತೆಗಳಿವೆ. ಈ ಮಳೆಯಿಂದ ಕಡಿಮೆ ತಾಪಮಾನ ಉಂಟಾಗಿ, ಮಣ್ಣಿನಲ್ಲಿನ ತೇವಾಂಶ, ವಾತಾವರಣದಲ್ಲಿನ ಆರ್ಧತೆ ಹೆಚ್ಚಾಗಿ ದೀರ್ಘ ಕಾಲದವರೆಗೆ ಎಲೆಗಳ ಮೇಲೆ ತೇವಾಂಶ ಉಳಿದಿರುವದು ಕಂಡುಬಂದಿದೆ. ಈ ವ್ಯತಿರಿಕ್ತ ವಾತಾವರಣದಿಂದ ಅಕಾಲಿಕ ಕಾಫಿ ಉದುರುವಿಕೆ, ಕೊಳೆರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯು ಅರೇಬಿಕಾ ಮತ್ತು ರೋಬಸ್ಟಾ ಕಾಫಿಯಲ್ಲಿ ಕಂಡುಬರುವ ಸಾಧ್ಯತೆಗಳಿರುವದರಿಂದ ಕಾಫಿ ಬೆಳೆಗಾರರು ಮುಂಜಾಗ್ರತ ಕ್ರಮ ಅನುಸರಿಸಬೇಕು.
ಚರಂಡಿ ಹಾಗೂ ತೊಟ್ಟಿಲು ಗುಂಡಿಗಳನ್ನು ಸೋಸಿ ಹೆಚ್ಚುವರಿ ನೀರನ್ನು ಬಸಿದು ಹೋಗುವಂತೆ ಮಾಡುವದು. ಕಾಫಿ ಗಿಡಗಳ ಕೆಳಗೆ ಬಿದ್ದಿರುವ ದರಗುಗಳನ್ನು ನಾಲ್ಕು ಕಾಫಿ ಗಿಡಗಳ ಮಧ್ಯದಲ್ಲಿ ರಾಶಿ ಮಾಡಿ ಗಾಳಿಯಾಡುವಂತೆ ಅನುಕೂಲ ಮಾಡುವದು.
ಗಿಡಗಳ ಬೇರಿನ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು, ಪ್ರತೀ ಎಕರೆಗೆ ಒಂದು ಚೀಲ (50 ಕೆ.ಜಿ.) ಯೂರಿಯಾವನ್ನು ಮಳೆ ಬಿಡುವಿನ ಸಮಯದಲ್ಲಿ ಅಥವಾ ಮಳೆ ನಿಂತ ತಕ್ಷಣ ಹಾಕುವದು. ಕೊಳೆ ರೋಗ ಕಂಡುಬಂದಲ್ಲಿ ರೋಗ ಪೀಡಿತ ಎಲೆಗಳು ಮತ್ತು ಕಾಯಿಗಳನ್ನು ತೆಗೆದ ನಂತರ 200 ಗ್ರಾಂ. ಕಾರ್ಬನ್ ಡೈಜಿಮ್ 50 ಡಬ್ಲ್ಯೂಪಿ+75 ಮಿ.ಲೀ. ಪ್ಲಾನೋಫಿಕ್ಸ್+100 ಮಿ.ಲೀ. ಅಂಟು ದ್ರಾವಣವನ್ನು 200 ಲೀಟರ್ ನೀರಿನಲ್ಲಿ ಬೆರಸಿ, ಮಳೆ ಬಿಡುವಿನ ಸಮಯದಲ್ಲಿ ಸಿಂಪಡಿಸುವದರಿಂದ ರೋಗ ಹರಡುವದನ್ನು ತಡೆಯಬಹುದಾಗಿದೆ ಎಂದು ವೀರಾಜಪೇಟೆ ಕಾಫಿ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.