ವೀರಾಜಪೇಟೆ, ಆ. 15: ವೀರಾಜಪೇಟೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಸಂತ್ರಸ್ತರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ತಲಾ ರೂ. 3800 ಪರಿಹಾರದ ಚೆಕ್ ಹಾಗೂ ಫುಡ್ ಕಿಟ್‍ಗಳನ್ನು ವಿತರಿಸಿದರು. ಬಳಿಕ ಸಂತ್ರಸ್ತರಿಗೆ ಯಾವದೇ ಆತಂಕ ಬೇಡ. ಭಾರೀ ಮಳೆಯಿಂದ ಮನೆ ಕಳೆದುಕೊಂಡವರಿಗೆ ಸರಕಾರ ಮನೆ ಕಟ್ಟಿಸಿ ಕೊಡುತ್ತದೆ. ಅಲ್ಲಿಯ ತನಕ ಬಾಡಿಗೆ ಮನೆಯಲ್ಲಿರಲು ತಲಾ ರೂ. 5000 ಬಾಡಿಗೆಯನ್ನು ನೀಡಲಿದೆ ಎಂದು ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಂತ್ರಸ್ತರಿಗೆ ಇಲ್ಲಿನ ಚಿಕ್ಕಪೇಟೆಯ ಸರಕಾರಿ ಶಾಲೆಯಲ್ಲಿ ಪುನರ್ವಸತಿ ಕೇಂದ್ರವನ್ನು ಕಲ್ಪಿಸಲಾಗಿದ್ದು, ಪಟ್ಟಣದ ಸುಮಾರು 230 ಸಂತ್ರಸ್ತರು ಈ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದರು. ಬಳಿಕ ಬೋಪಯ್ಯ ಅವರು ವೀರಾಜಪೇಟೆ ವ್ಯಾಪ್ತಿಯಲ್ಲಿ ಬಿರುಕುಬಿಟ್ಟಿರುವ ಸ್ಥಳಗಳಲ್ಲಿ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಮನೆಯಪಂಡ ಕೆ. ದೇಚಮ್ಮ, ಪೂರ್ಣಿಮಾ, ತಬ್ಸಮ್, ಸುಶ್ಮಿತಾ, ಮಹದೇವ್, ಡಿ.ಪಿ. ರಾಜೇಶ್, ಮಹಮ್ಮದ್ ರಾಫಿ, ಅನಿತಾ, ಹರ್ಷವರ್ಧನ್ ಮತ್ತಿತರರು ಹಾಜರಿದ್ದರು.