ಮಡಿಕೇರಿ, ಆ. 15: ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೊಡಗಿನಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಲಕಾವೇರಿಯ ಶ್ರೀ ಕಾವೇರಮ್ಮನ ಸನ್ನಿಧಿಯಲ್ಲಿ ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಚೆಟ್ಟಿಮನಿ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ, ಸಮಸ್ಯೆಗಳನ್ನು ಆಲಿಸಿದರು ಮತ್ತು ಕೂಡಲೇ ದೂರವಾಣಿಯಲ್ಲಿ ಮೇಲಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ವ್ಯವಸ್ಥೆ ಮಾಡುವಂತೆ ಆದೇಶಿಸಿದರು.

ಬಳಿಕ ಚೇರಂಗಾಲದಲ್ಲಿ, ಸರಕಾರಿ ಅಧಿಕಾರಿಯೊಬ್ಬರು ಜಾಗ ಅತಿಕ್ರಮಣ ಮಾಡಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕೋರಂಗಾಲ ಗ್ರಾಮದಲ್ಲಿ ಗುಡ್ಡ ಕುಸಿತಕ್ಕೆ ಸಿಲುಕಿ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಿದರು ಮತ್ತು ಅವರ ಭವಿಷ್ಯಕ್ಕೆ ಬೇಕಾದಂತಹ ಅಗತ್ಯ ಸೌಲಭ್ಯವನ್ನು ಸರಕಾರದ ವತಿಯಿಂದ ಕೊಡಿಸುವ ಭರವಸೆ ನೀಡಿದರು.

ಬಳಿಕ ನಾಪೋಕ್ಲುವಿನ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತನಾಡಿ, ಸೂಕ್ತ ಸೂರು ಕಲ್ಪಿಸಿಕೊಡುವ ಭರವಸೆ ನೀಡಿದರಲ್ಲದೆ ಅವರಿಗೆ ಆತ್ಮಸ್ಥೈರ್ಯ ತುಂಬಿದರು. ತಲಕಾವೇರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಕೆದಂಬಾಡಿ ರಮೇಶ, ನಿಡ್ಯಮಲೆ ಪ್ರಮೀಳ, ಕುದುಪಜೆ ಪ್ರಕಾಶ್, ಹನೀಫ್ ಸಂಪಾಜೆ, ದೇವಂಗೂಡಿ ಹರ್ಷ, ಹ್ಯಾರಿಸ್, ಸೂರಜ್, ಬಷೀರ್, ಕೆ. ಗೋಪಾಲ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.