ಗೋಣಿಕೊಪ್ಪಲು, ಆ. 14: ಮಳೆಹಾನಿಯಿಂದ ತೊಂದರೆಗೀಡಾಗಿದ್ದ ಮನೆಗಳಿಗೆ ಭೇಟಿ ನೀಡಿದ ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ಪುರಂದರರವರು ಮನೆ ಮನೆಗೆ ತೆರಳಿ ಹಾನಿಯಾದ ಮನೆಯನ್ನು ವೀಕ್ಷಿಸಿ ಸರ್ವೆ ಕಾರ್ಯ ನಡೆಸಿದರಲ್ಲದೆ ನೊಂದ ಕುಟುಂಬಗಳ ರಕ್ಷಣೆಗೆ ಇಲಾಖೆಯು ಕಟ್ಟಿಬದ್ಧರಾಗಿದ್ದು, ಯಾರೂ ಕೂಡ ಆತಂಕಪಡುವ ಅವಶ್ಯಕತೆ ಇಲ್ಲ. ತೊಂದರೆ ಇರುವ ಕುಟುಂಬಗಳು ಇಲಾಖೆಯು ತೆರೆದಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯಪಡೆಯಬಹುದು ಎಂದು ಧೈರ್ಯ ತುಂಬಿದರು.
ಗೋಣಿಕೊಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಳೆಯಿಂದ ಸಂಪೂರ್ಣ ಕುಸಿದ ಮನೆ ಹಾಗೂ ಭಾಗಶಃ ಮನೆ ಕುಸಿತಗೊಂಡಿರುವದನ್ನು ಪರಿಶೀಲಿಸಿ ಕುಟುಂಬಗಳು ಆದಷ್ಟು ಬೇಗನೇ ಇಲಾಖೆಗೆ ಲಿಖಿತ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು. ಮನೆಯನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಹೊಳೆ ದಂಡೆಯ ಭಾಗದಲ್ಲಿ ವಾಸಿಸುವ ಜನರು ಶಾಶ್ವತವಾಗಿ ನಮಗೆ ನೆಲೆ ನೀಡುವಂತೆ ತಹಶೀಲ್ದಾರ್ ಪುರಂದರ ಅವರ ಬಳಿ ಕೇಳಿಕೊಂಡರು. ಭಾಗಶಃ ಹಾನಿಯಾಗಿರುವ ಮನೆಯೊಳಗೆ ಪ್ರವೇಶ ಮಾಡಿದ ತಹಶೀಲ್ದಾರ್ ತಮ್ಮ ಸಿಬ್ಬಂದಿಗಳ ಸಹಕಾರದಿಂದ ತಾವೇ ಗೋಡೆ ಕುಸಿತದ ಫೋಟೋಗಳನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದು ನೊಂದ ಕುಟುಂಬಗಳಿಗೆ ಧೈರ್ಯ ಹೇಳಿದರು.
ಕಳೆದ ಮೂರು ದಿನಗಳ ಹಿಂದೆ ಪೊನ್ನಂಪೇಟೆ ಹೋಬಳಿಯ ಗೋಣಿಕೊಪ್ಪಲು ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ತೆರೆಯಲಾಗಿರುವ ಪರಿಹಾರ ಕೇಂದ್ರದಲ್ಲಿ ಸವಲತ್ತುಗಳನ್ನು ಪಡೆಯಲು ಮುಗಿಬೀಳುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ತಾಲೂಕು ಆಡಳಿತ ಸರ್ಕಾರದ ಸವಲತ್ತುಗಳು ಅನ್ಯರ ಪಾಲಾಗುವದನ್ನು ತಪ್ಪಿಸಲು ಪೊನ್ನಂಪೇಟೆ ರೆವೆನ್ಯೂ ಅಧಿಕಾರಿಗಳಾದ ರಾಧಕೃಷ್ಣ ಅವರ ಮುಂದಾಳತ್ವದಲ್ಲಿ ಗ್ರಾಮ ಲೆಕ್ಕಿಗ, ಪಿಡಿಒ, ಪಂಚಾಯಿತಿ ಬಿಲ್ ಕಲೆಕ್ಟರ್, ಪೊಲೀಸ್ ಸಿಬ್ಬಂದಿ ಹಾಗೂ ಪಂಚಾಯಿತಿ ಸದಸ್ಯರ ತಂಡ ಮಳೆಯಿಂದ ಹಾನಿಗೊಳಗಾದ ಪ್ರತಿ ಮನೆಗಳಿಗೆ ತೆರಳಿ ಫೋಟೋ ಸಹಿತ ಸರ್ವೆ ನಡೆಸಿ ಇಲಾಖೆಗೆ ಮಾಹಿತಿ ನೀಡಿದ್ದರು. ಇದೀಗ ಖುದ್ದು ತಹಶೀಲ್ದಾರ್ ಮನೆಗಳಿಗೆ ಭೇಟಿ ನೀಡಿರುವದು ಸಂತ್ರಸ್ತರಿಗೆ ನೆಮ್ಮದಿ ತಂದಂತಾಗಿದೆ. ತಹಶೀಲ್ದಾರ್ ಭೇಟಿ ಸಂದರ್ಭ ರೆವೆನ್ಯೂ ಅಧಿಕಾರಿಗಳಾದ ರಾಧಕೃಷ್ಣ, ಅರುವತೊಕ್ಕಲು ಗ್ರಾಮ ಲೆಕ್ಕಿಗ ಮಂಜುನಾಥ್, ಗ್ರಾಮ ಸಹಾಯಕ ಸುನಿಲ್ ಹಾಜರಿದ್ದರು. -ಹೆಚ್.ಕೆ. ಜಗದೀಶ್