ಸಿದ್ದಾಪುರ, ಆ. 14: ಕಳೆದ ಒಂದು ವಾರಗಳಿಂದ ಸುರಿದ ಧಾರಾಕಾರ ಮಳೆಯಿಂದ ಕಾವೇರಿ ನದಿಯ ಪ್ರವಾಹದಿಂದಾಗಿ ಸಿದ್ದಾಪುರ, ನೆಲ್ಯಹುದಿಕೇರಿ, ಕೊಂಡಂಗೇರಿ ವ್ಯಾಪ್ತಿಯಲ್ಲಿ ನೂರಾರು ಮನೆಗಳು ಸಂಪೂರ್ಣ ಕುಸಿದಿರುತ್ತವೆ. ನೂರಾರು ಮನೆಗಳು ಹಾನಿಗೊಳಗಾಗಿ ವಾಸಕ್ಕೆ ಯೋಗ್ಯವಿಲ್ಲದಂತಾಗಿವೆ. ಸಾವಿರಾರು ಕುಟುಂಬಗಳು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅಮ್ಮತ್ತಿ ಸಮೀಪದ ಹಚ್ಚಿನಾಡು ಗ್ರಾಮದ ನದಿ ದಡದ ನಿವಾಸಿಗಳಾದ ಪುಷ್ಪ, ರತ್ನ, ಚಿತ್ರ, ಗೋಪಿ ಎಂಬವರ ಮನೆಗಳು ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ಕುಸಿದು ನೆಲಕಚ್ಚಿವೆ. 12 ಕುಟುಂಬಗಳು, 60 ಮಂದಿ ನಿವಾಸಿಗಳು ಹಚ್ಚಿನಾಡು ಸರಕಾರಿ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇವರುಗಳಿಗೆ ಗ್ರಾ.ಪಂ. ಕಾರ್ಯದರ್ಶಿ. ಧರಣಿ, ನೋಡಲ್ ಅಧಿಕಾರಿ ಶಿವಕುಮಾರ್ ಹಾಗೂ ಗ್ರಾಮಲೆಕ್ಕಿಗ ಮುತ್ತಪ್ಪ ಮತ್ತು ಗ್ರಾ.ಪಂ.ಯ ಸದಸ್ಯರುಗಳು ಸೇರಿ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿ ದ್ದಾರೆ. ನದಿ ದಡದ ಎಲ್ಲಾ ಮನೆಗಳು ಜಲಾವೃತ ಗೊಂಡು ಹಾನಿಗೊಳಗಾಗಿವೆ.

ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ, ಕೊಂಡಂಗೇರಿ ವ್ಯಾಪ್ತಿಯಲ್ಲಿ ಕುಸಿದಿರುವ ಮನೆಗಳ ಮಣ್ಣಿನೊಳಗೆ ಸಿಲುಕಿಕೊಂಡಿರುವ ಬೆಲೆ ಬಾಳುವ ವಸ್ತುಗಳು ಸಂಪೂರ್ಣ ನಾಶ ಗೊಂಡಿವೆ. ಜಲಾವೃತಗೊಂಡಿ ರುವ ಮನೆಗಳ ನಿವಾಸಿಗಳು ತಮ್ಮ ಮನೆಗಳನ್ನು ಸ್ವಚ್ಛ ಗೊಳಿಸುತ್ತಿದ್ದಾರೆ. ಭಾಗಶಃ ಹಾನಿಗೊಳಗಾದವರು ಹಾಗೂ ಕುಸಿದಿರುವ ಮನೆಗಳ ನಿವಾಸಿಗಳು ಮುಂದೇನು ಮಾಡುವ ದೆಂದು ಆತಂಕಕ್ಕೆ ಸಿಲುಕಿದ್ದಾರೆ. ಪರಿಹಾರ ಕೇಂದ್ರದಿಂದ ಹೊರಬಂದು ಸಂಸಾರ, ಮಕ್ಕಳೊಂದಿಗೆ ಯಾವ ರೀತಿಯಲ್ಲಿ ಜೀವನ ಸಾಗಿಸುವದೆಂದು ಚಿಂತಿಸುತ್ತಿದ್ದಾರೆ. ಬಾಡಿಗೆ ಮನೆಗಳು ಕೂಡ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

30 ವರ್ಷಕ್ಕಿಂತಲೂ ಅಧಿಕ ವರ್ಷದಿಂದ ತಾವು ಕಷ್ಟಪಟ್ಟು ನಿರ್ಮಾಣ ಮಾಡಿ ವಾಸವಿದ್ದ ಮನೆ ಕಳೆದುಕೊಂಡು ಬೀದಿಪಾಲಾಗಿರುವ ಬಗ್ಗೆ ದುಃಖಿಸುತ್ತಿದ್ದಾರೆ. ಕುಸಿದಿರುವ ಮನೆಯೊಳಗೆ ಕೆಲವು ವಸ್ತುಗಳು ಮಾತ್ರ ಲಭಿಸುತ್ತಿದ್ದು ಉಳಿದ ವಸ್ತುಗಳು, ಪೀಠೋಪಕರಣಗಳು ನೀರು ಪಾಲಾಗಿವೆ. ಸರಕಾರದಿಂದ ಪರಿಹಾರ ಯಾವಾಗ ಬರಬಹುದೆಂದು ಊಹಿಸಲು ಸಾಧ್ಯವಿಲ್ಲ ಎಂದು ಸಂತ್ರಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಾಮಳೆಯ ಆರ್ಭಟ ದಿಂದಾಗಿ ನದಿ ದಡದ ನಿವಾಸಿಗಳು ನಲುಗಿಹೋಗಿದ್ದಾರೆ. ಮನೆ ಮಠಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಇದೀಗ ಕೂಲಿ ಕೆಲಸಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲವೆಂದು ಬಡ ಜನತೆ ಪರಿತಪಿಸುತ್ತಿದ್ದಾರೆ. ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನದಿ ದಡದ ನಿವಾಸಿಗಳು ಪ್ರವಾಹಕ್ಕೆ ಸಿಲುಕಿ ಕುಸಿದಿರುವ ಹಾಗೂ ಹಾನಿಗೊಳಗಾದವರ ಪಟ್ಟಿಯನ್ನು ಕಂದಾಯ ಇಲಾಖೆಯವರು ನೊಂದಾಯಿಸುತ್ತಿದ್ದಾರೆ. ಆದರೆ ಈ ಬಾರಿ ಕಂಡು ಕೇಳರಿಯದಷ್ಟು ಮನೆಗಳು, ಕೃಷಿ ಫಸಲುಗಳು ನಾಶವಾಗಿ ನಷ್ಟಗೊಂಡಿರುವದು ಅಚ್ಚರಿ ಮೂಡಿಸಿದೆ.

ದಡಗಳ ಬಳಿ ದುರ್ನಾತ:! ಕಾವೇರಿ ನದಿಯು ಅಪಾಯ ಮಟ್ಟದಲ್ಲಿ ಹರಿದು ಪ್ರವಾಹಕ್ಕೆ ಸಿಲುಕಿ ಸಾಕು ಪ್ರಾಣಿಗಳು ಸಾವನ್ನಪ್ಪಿದ್ದು ಈ ಸಾಕು ಪ್ರಾಣಿಗಳು ನೀರಿನಲ್ಲಿ ಹರಿದು ಬಂದು ನದಿ ದಡದಲ್ಲಿ ಸಿಲುಕಿಕೊಂಡಿದ್ದವು. ಇದೀಗ ಕೊಳೆತು ನಾರುತ್ತಿರುವ ಸಾಕು ಪ್ರಾಣಿಗಳ ತ್ಯಾಜ್ಯಗಳು ದುರ್ನಾತ ಬೀರುತ್ತಿದೆ. ನದಿದಡದ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಬಾರಿಯ ಮಹಾಮಳೆಯು ಹಲವಾರು ಅನಾಹುತ ಮಾಡಿದ್ದು ಜನರ ನೆಮ್ಮದಿ ಕೆಡಿಸಿದೆ. ಜನರು ಇದರಿಂದಾಗಿ ಹೊರ ಬರಲು ಸಾಕಷ್ಟು ಸಮಯ ಬೇಕಾಗಬಹುದೆಂಬ ಅಭಿಪ್ರಾಯ ಕೇಳಿ ಬರುತ್ತಿದೆ.

-ವಾಸು.