*ಸಿದ್ದಾಪುರ, ಆ. 14: ಮನೆ-ಮಠ ತೋಟ ಭೀಕರ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಸರಕಾರ ಜನಪ್ರತಿನಿಧಿಗಳು ಮುಂದಿನ ಬದುಕು ಕಟ್ಟಿಕೊಳ್ಳಲು ನೆರವಿನ ಹಸ್ತಕಲ್ಪಿಸುವ ಭರವಸೆ ನೀಡುತ್ತಿದೆ ಆದರೆ ಎಲ್ಲಾ ಕಳೆದುಕೊಂಡು ಉಟ್ಟ ಬಟ್ಟೆಯಲ್ಲೇ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವವರು ಮುಂದೆ ಜೀವನ ಹೇಗೆ ಎಂದು ಚಿಂತಾಕ್ರಾಸ್ತರಾಗಿ ಮುಖದಲ್ಲಿ ನೋವಿನ ಛಾಯೆ ಮಡುಗಟ್ಟಿದೆ.
ನೆಲ್ಲಿಹುದಿಕೇರಿ ಮುತ್ತಪ್ಪ ದೇವಾಲಯದ ಸಭಾಂಗಣ, ನೆಲ್ಲಿಹುದಿಕೇರಿ ನಲವತ್ತೇರಿ ಶಾದಿಮಹಲ್, ನೆಲ್ಲಹುದಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಾಲ್ನೂರು ಹಿರಿಯ ಪ್ರಾಥಮಿಕ ಶಾಲೆ, ಕರಡಿಗೋಡು ಹಿರಿಯ ಪ್ರಾಥಮಿಕ ಶಾಲೆ, ಬಸವೇಶ್ವರ ದೇವಸ್ಥಾನದಲ್ಲಿ ಸಿದ್ದಾಪುರ ಬಿಜಿಎಸ್ ಜೂನಿಯರ್ ಕಾಲೇಜಿನಲ್ಲಿ ಮನೆ, ಮಠ ಕಳಕೊಂಡು ಮಕ್ಕಳು, ಕುಟುಂಬ ಸದಸ್ಯರೊಂದಿಗೆ ಪರಿಹಾರ ಕೇಂದ್ರದಲ್ಲಿ ಬೀಡುಬಿಟ್ಟವರ ಬದುಕು ಶೋಚನೀಯ.
ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಜಾಗದಲ್ಲಿ ಮನೆ ನಿರ್ಮಿಸಿಕೊಡುವ ಭರವಸೆ ನೀಡುತ್ತಿದ್ದಾರೆ. ಅಲ್ಲಿ ತೋಟ, ಆಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡುವದಾಗಿ ಹೇಳುತ್ತಿದ್ದಾರೆ. ಕಳೆದ ವರ್ಷ ಅತಿವೃಷ್ಟಿಯಿಂದ ಮನೆ ಕಳೆದುÀಕೊಂಡವರಿಗೆ ಇನ್ನೂ ಸೂರು ಲಭಿಸಿಲ್ಲ. ಭೂಕುಸಿತಕ್ಕೆ, ಜಲಪ್ರಳಯದಿಂದ ತೋಟ ಕೊಚ್ಚಿ ಹೋಗಿ ಕಂಗಾಲಾದವರಿಗೆ ಅಲ್ಪಮೊತ್ತದ ಪರಿಹಾರ ನೀಡಿ ಸರಕಾರ ಕೈತೊಳೆದು ಕೊಂಡಿದೆ. ಇನ್ನೂ ಅನೇಕರಿಗೆ ಚಿಕ್ಕಾಸು ಪರಿಹಾರ ಸಿಗಲಿಲ್ಲ ಎಂಬ ಆರೋಪವೂ ಇದೆ. ಈ ನಿಟ್ಟಿನಲ್ಲಿ ಕಾಫಿ ತೋಟ, ಗದ್ದೆ ಪ್ರವಾಹದಿಂದ ನಷ್ಟವಾದವರಿಗೆ ಮುಂದಿನ ಬದುಕು ಕಟ್ಟಿಕೊಳ್ಳಲು ಸಮರ್ಥವಾದ ಪರಿಹಾರ ಕೊಡಬೇಕು ಎಂದು ನೊಂದವರು ಆಗ್ರಹಿಸುತ್ತಿದ್ದಾರೆ.
ಕರಡಿಗೋಡು, ನೆಲ್ಲಿಹುದಿಕೇರಿ, ವಾಲ್ನೂರು ತ್ಯಾಗತ್ತೂರು, ಅರೆಕಾಡು, ಸಿದ್ದಾಪುರ ವಿಭಾಗದಲ್ಲಿ ಪ್ರವಾಹದ ನೀರು ಏಕಾಏಕಿ ಮನೆಗೆ ನುಗ್ಗಲು ಆರಂಭಿಸಿದಾಗ ಬದುಕಿದೆಯಾ ಬಡಜೀವ ಎಂದು ಮನೆಯಿಂದ ಓಡಿ ಬಂದು ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದವರ ಶೇ. 70 ರಷ್ಟು ಮನೆ ಕಾವೇರಿ ನದಿ ಪಾಲಾಗಿದೆ. ಮನೆಯಲ್ಲಿದ್ದ ಬಟ್ಟೆ ಬರೆ, ಶಾಲಾ ಮಕ್ಕಳ ಪುಸ್ತಕ, ಪಡಿತರ ಚೀಟಿ, ಪಾಸ್ಬುಕ್, ಶಾಲೆಯ ದಾಖಲಾತಿ, ವೋಟರ್ ಐಡಿಕಾರ್ಡು ಇತ್ಯಾದಿ ಪ್ರಮುಖ ದಾಖಲೆಗಳು ನೀರುಪಾಲಾಗಿದ್ದು, ಮುಂದೆ ಹೊಸದಾಗಿ ಜೀವನ ಸಾಗಿಸುವದು ಹೇಗೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಪ್ರತಿ ವರ್ಷ ಮಳೆಗಾಲದಲ್ಲಿ ಕರಡಿಗೋಡು, ನೆಲ್ಲಿಹುದಿಕೇರಿ, ವಾಲ್ನೂರು ವಿಭಾಗದಲ್ಲಿ ಹೊಳೆ ಕರೆ ನಿವಾಸಿಗಳ ಮನೆಗೆ ನೀರು ನುಗ್ಗುವದು ಮಾಮೂಲಿಯಾಗಿದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ನೀರು ಬಂದು ಮನೆಯೇ ಕೊಚ್ಚಿಹೋದ ಘಟನೆ ಸಂಭವಿಸಿರಲಿಲ್ಲ ಎಲ್ಲೂ ಮನೆ ನಿರ್ಮಿಸಲು ಜಾಗ ಸಿಗದಿದ್ದಾಗ ನಾವು ಗತ್ಯಂತರವಿಲ್ಲದೆ. ಕೂಲಿ ನಾಲಿ ಮಾಡಿ ಕೂಡಿಟ್ಟ ಹಣದಿಂದ ಹೊಳೆ ಕೆರೆಯಲ್ಲಿ ಮನೆ ನಿರ್ಮಿಸಿಕೊಂಡಿದ್ದೇವೆ. ಆದರೆ ಈಗ ಎಲ್ಲಾ ಕಳೆದುಕೊಂಡೆವು ಎಂದು ನಿರಾಶ್ರಿತ ಕೇಂದ್ರದಲ್ಲಿರುವ ಆಶೀರಾ, ಸುರೇಶ, ನಸ್ಸೀಮಾ ಅಳಲು ತೋಡಿಕೊಂಡರು.
ಮನೆ, ತೋಟ, ಗದ್ದೆ ಕಳಕೊಂಡವರಿಗೆ ಸೂಕ್ತ ಪರಿಹಾರ ನೀಡಿ ಅವರ ಬದುಕಿಗೂ ಆಶ್ರಯ ನೀಡಬೇಕಾಗಿದೆ. -ಅಂಚೆಮನೆ ಸುಧಿ