ಭಾಗಮಂಡಲ, ಆ. 15: ಕೋರಂಗಾಲದಲ್ಲಿ ಭಾರೀ ಕುಸಿತದಿಂದ ಮೃತರಾದ ಬೋಳನ ಬಾಲಕೃಷ್ಣ, ಯಮುನ ಅವರು ಕುಟುಂಬ ಸದಸ್ಯರಿಗೆ ಇಂದು ಶಾಸಕ ಕೆ.ಜಿ. ಬೋಪಯ್ಯ ಹತ್ತು ಲಕ್ಷ ರೂ. ಪರಿಹಾರ ಚೆಕ್ ಅನ್ನು ವಿತರಿಸಿದರು. ಜೊತೆಗೆ ವೈಯಕ್ತಿಕವಾಗಿ ಸಹಾಯಧನ ವಿತರಿಸಿದರು.

ಇದೇ ಸಂದರ್ಭ ಗ್ರಾ.ಪಂ. ವತಿಯಿಂದ ಮೃತರ ನಾಲ್ಕು ಕುಟುಂಬಗಳ ಐದು ಜನರಿಗೆ ತಲಾ ಐದು ಸಾವಿರ ರೂ. ನೀಡಲಾಯಿತು. ಬಳಿಕ ಬೋಪಯ್ಯ ಪ್ರವಾಹಕ್ಕೆ ಒಳಗಾಗಿ ಹಾನಿಗೀಡಾದ ಎಲ್ಲಾ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಭಾಗಮಂಡಲದ ಕಂದಾಯಾಧಿಕಾರಿ ಶೀಲಾ ಅವರು ಸಾರ್ವಜನಿಕರ ಕೆಲಸ - ಕಾರ್ಯಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಈ ಸಂದರ್ಭ ಶಾಸಕರು ಸ್ಥಳದಲ್ಲಿಯೇ ಇದ್ದ ಶೀಲಾ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಈ ಬಗ್ಗೆ ಗಮನ ಹರಿಸುವಂತೆ ಆರ್.ಐ., ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಈ ಸಂದರ್ಭ ತಾ.ಪಂ. ಇ.ಒ. ಲಕ್ಷ್ಮಿ, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ತಹಶೀಲ್ದಾರ್ ಮಹೇಶ್, ಗ್ರಾ.ಪಂ. ಅಧ್ಯಕ್ಷೆ ಸುಮಿತ, ಉಪಾಧ್ಯಕ್ಷೆ ಕಾಳನ ಭವಾನಿ, ಸದಸ್ಯರಾದ ರಾಜ ರೈ, ಭಾಸ್ಕರ, ಸುನಿತಾ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಕಾಳನ ರವಿ ಇನ್ನಿತರರು ಇದ್ದರು. -ಸುನಿಲ್