ಮಡಿಕೇರಿ, ಆ. 15: ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಸಂತ್ರಸ್ತರಿಗೆ ರೆಡ್ ಕ್ರಾಸ್ ಜಿಲ್ಲಾ ಘಟಕದ ವತಿಯಿಂದ ನೆರವು ನೀಡಲಾಯಿತು.
ಕೊಡಗು ಜಿಲ್ಲೆಯ ವಿವಿಧ ಪರಿಹಾರ ಕೇಂದ್ರಗಳಲ್ಲಿರುವ ಮತ್ತು ನೆರೆಯಿಂದ ಸಂತ್ರಸ್ತರಾದ 120 ಕ್ಕೂ ಅಧಿಕ ಕುಟುಂಬಗಳ ಸುಮಾರು 430 ಮಂದಿಗೆ ರೆಡ್ ಕ್ರಾಸ್ ವತಿಯಿಂದ ನೀಡಲಾಗುವ ಹೊದಿಕೆ, ಬಟ್ಟೆ, ಪಾತ್ರೆಗಳುಳ್ಳ ನೆರವಿನ ಕಿಟ್ ವಿತರಿಸಲಾಯಿತು.
ರೆಡ್ ಕ್ರಾಸ್ ತಂಡವು ಸಂತ್ರಸ್ತರಿಗೆ ಸಾಂತ್ವನ ಹೇಳಿತಲ್ಲದೇ ಸರ್ಕಾರಗಳ ಮೂಲಕ ನಿರಾಶ್ರಿತರಿಗೆ ಎಲ್ಲಾ ನೆರವು ನೀಡಲು ಮುಂದಾಗುವದರ ಜತೆಗೆ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೆಡ್ ಕ್ರಾಸ್ ಮೂಲಕ ಆರೋಗ್ಯ ಚಿಕಿತ್ಸೆ ಒಳಗೊಂಡಂತೆ ಎಲ್ಲಾ ರೀತಿಯ ನೆರವು ನೀಡುವದಾಗಿಯೂ ಹೇಳಿತು.
ರೆಡ್ ಕ್ರಾಸ್ ಕೊಡಗು ಘಟಕದ ಜಿಲ್ಲಾಧ್ಯಕ್ಷೆಯಾಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾರ್ಗದರ್ಶನದಂತೆ ರೆಡ್ ಕ್ರಾಸ್ ಜಿಲ್ಲಾ ಸಭಾಧ್ಯಕ್ಷ ಬಿ.ಕೆ. ರವೀಂದ್ರ ರೈ, ಕಾರ್ಯದರ್ಶಿ ಹೆಚ್.ಆರ್. ಮುರಳೀಧರ್, ನಿರ್ದೇಶಕರಾದ ಕೆ.ಡಿ. ದಯಾನಂದ, ಪಿ.ಆರ್. ರಾಜೇಶ್, ಎಂ. ಧನಂಜಯ್, ನವೀನ್ ಪೂಜಾರಿ, ಶಿಲ್ಪಾ ರೈ, ರೆಡ್ ಕ್ರಾಸ್ ಉಪಾಧ್ಯಕ್ಷರಾದ ಸ್ಯಾಮ್ ಜೋಸೆಫ್, ಅನಿಲ್ ಎಚ್.ಟಿ. ಪರಿಹಾರ ಕೇಂದ್ರಗಳಿಗೆ ತೆರಳಿ ರೆಡ್ ಕ್ರಾಸ್ ಕಿಟ್ ವಿತರಿಸಿದರು.