(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಆ. 14: ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತ ನಗರದಲ್ಲಿ ದುರ್ವಾಸನೆ ಬೀರುತ್ತಿದ್ದ ಕಸದ ರಾಶಿಗಳು ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಕೊಚ್ಚಿಹೋಗಿದ್ದು ಕಸದ ಗುಡ್ಡೆಗಳು ಕಾಣದಂತಾಗಿದ್ದು ಕೀರೆಹೊಳೆ ಇದೀಗ ಸ್ವಚ್ಛಗೊಂಡು ಶಾಂತ ರೀತಿಯಲ್ಲಿ ಹರಿಯುತ್ತಿದೆ. ಗೋಣಿಕೊಪ್ಪಲು ನಗರ ಸ್ವಚ್ಛಗೊಂಡಿದೆ. ಕೊಳೆಯುತ್ತಿದ್ದ ಕಸವನ್ನು ತೆರವುಗೊಳಿಸುತ್ತಿದ್ದ ಪಂಚಾಯಿತಿಯ ಪೌರ ಕಾರ್ಮಿಕರ ಮುಖದಲ್ಲಿ ಹರ್ಷ ಮೂಡಿದೆ. ಪಟ್ಟಣದ ರಸ್ತೆ ಬದಿಗಳಲ್ಲಿ ಕೀರೆಹೊಳೆ ಹಾಗೂ ಬೈಪಾಸ್ ರಸ್ತೆಯ ಕೈ ತೋಡು ಹಾಗೂ ದಡವು ಕಸದಿಂದ ಮುಕ್ತಿಗೊಂಡಿದೆ. ಸಿಕ್ಕ ಸಿಕ್ಕ ಜಾಗಗಳಲ್ಲಿ ಹಳ್ಳ ಕೊಳ್ಳ ತೋಡುಗಳನ್ನದೇ ಜನರು ಮನಬಂದಂತೆ ಕಸವನ್ನು ತುಂಬಿದ್ದರು.

ಗ್ರಾಮ ಪಂಚಾಯಿತಿ ಈ ಬಗ್ಗೆ ಕ್ರಮ ಕೈಗೊಳ್ಳಲು ಹಲವಾರು ಬಾರಿ ಶ್ರಮ ಪಟ್ಟಿದ್ದರೂ ಇವರ ಶ್ರಮ ವ್ಯರ್ಥವಾಗಿತ್ತು. ಪಟ್ಟಣದ ನಿವಾಸಿಗಳು ಕಸದ ದುರ್ವಾಸನೆ ಸಹಿಸಲಾಗದೆ ಗ್ರಾಮ ಪಂಚಾಯಿತಿ ಮೇಲೆ ಆಕ್ರೋಶಗೊಂಡಾಗ ಕಸದ ರಾಶಿಯನ್ನು ರಾತೋರಾತ್ರಿ ಪೌರ ಕಾರ್ಮಿಕರ ಸಹಾಯ ಪಡೆದು ಸಮೀಪದ ಪಂಚಾಯಿತಿಗೆ ಸ್ಥಳಾಂತರಗೊಳಿಸುವ ಮೂಲಕ ಅಲ್ಲಿನ ಗ್ರಾಮಸ್ಥರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಕೋಪಕ್ಕೆ ಕಾರಣರಾಗಿದ್ದರು.

ಕಸವನ್ನು ವಿಲೇವಾರಿ ಮಾಡುವದಕ್ಕೆ ಗ್ರಾಮ ಪಂಚಾಯಿತಿ ಯಾವದೇ ವೈಜ್ಞಾನಿಕ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬಂದಂತಿಲ್ಲ. ಸದ್ಯ ಮಳೆಯಿಂದ ನಗರ ಶುಚಿಗೊಂಡಿದೆ. ಮುಂದಿನ ದಿನದಲ್ಲಿ ಕಸ ಸಂಗ್ರಹಣೆಯಾಗುವದನ್ನು ತಡೆಗಟ್ಟಲು ಈಗಿನಿಂದಲೇ ಪಂಚಾಯಿತಿ ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ.

ಪಟ್ಟಣದ ಹೃದಯ ಭಾಗದಲ್ಲಿ ಹರಿಯುತ್ತಿರುವ ಕೀರೆಹೊಳೆ ಮತ್ತು ತೋಡಿನ ಜಾಗ ಜೊತೆಗೆ ಬಹುಪಾಲು ಮದ್ಯದಂಗಡಿ, ಬೇಕರಿ, ಹೊಟೇಲ್ ಕಸಾಯಿಖಾನೆಯವರ ತ್ಯಾಜ್ಯವನ್ನು ಚೀಲದಲ್ಲಿ ತುಂಬಿಸಿ ಹೊಳೆಗೆ ಎಸೆಯುತ್ತಿರುವವರ ಮೇಲೆ ಪಂಚಾಯಿತಿ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಮುಂದಾದಲ್ಲಿ ಈ ಸಮಸ್ಯೆಯನ್ನು ಹತೋಟಿಗೆ ತರಲು ಸಾಧ್ಯವಿದೆ.

ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಒತ್ತುವರಿಯಾಗಿರುವ ಹೊಳೆ, ತೋಡುಗಳ ಜಾಗವನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಂದಾಗಬೇಕಾಗಿದೆ. ಅಲ್ಲದೆ ಹೊಳೆ ಹಾಗೂ ತೋಡಿಗೆ ಕಸ ಹಾಕಿ ನೀರಿಗೆ ವಿಷ ಉಣಿಸಿ ನೀರಿನ ಹರಿವಿಗೆ ತಡೆ ಒಡ್ಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮುಂದಿನ ದಿನದಲ್ಲಿ ನಗರದ ಜನತೆ ಪ್ರವಾಹದಿಂದ ನಲುಗದಂತೆÉ ಎಚ್ಚರವಹಿಸಲು ಇದು ಸೂಕ್ತ ಸಮಯವಾಗಿದೆ. ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಭಾವಿಗಳ ಒತ್ತುವರಿ

ವಿಶಾಲವಾಗಿ ಹರಿಯುತ್ತಿರುವ ಕೀರೆಹೊಳೆ ಹಾಗೂ ಬೈಪಾಸ್ ಕೈ ತೋಡನ್ನು ಅತಿಕ್ರಮಿಸಿಕೊಂಡು ಈ ಜಾಗಕ್ಕೆ ಸಮೀಪದ ಸರ್ವೆ ನಂ.ತೋರಿಸುವ ಮೂಲಕ ಅಧಿಕಾರಿಗಳನ್ನು ದಾರಿ ತಪ್ಪಿಸಿ ನಿವೇಶನ ಮಾಡಿಕೊಂಡು ಈ ನಿವೇಶನವನ್ನು ಬಾರಿ ಬೆಲೆಗೆ ಮಾರಾಟ ಮಾಡುವ ಮೂಲಕ ಹಣ ಮಾಡಿಕೊಂಡ ಒತ್ತುವರಿದಾರರು ಪ್ರಭಾವಿಗಳಾಗಿದ್ದಾರೆ. ಈ ಜಾಗದಲ್ಲಿ ಬೃಹತ್ ಕಟ್ಟಡ ಕಟ್ಟುವ ಮೂಲಕ ಹೊಳೆಯ ಜಾಗವನ್ನು ಬಳಸಿಕೊಂಡಿದ್ದಾರೆ. ಇದರಿಂದ ತೋಡು ಮತ್ತು ನದಿ ಪಾತ್ರ ಕಿರಿದಾಗುತ್ತಾ ನೀರು ಸರಾಗವಾಗಿ ಹರಿಯಲು ನೀರು ಮುನ್ನುಗ್ಗಲು ಆಗದೆ ಸುರಕ್ಷಿತವಾಗಿದ್ದ ದಡದ ಮನೆಗಳಿಗೂ ನೀರು ನುಗ್ಗುತ್ತಿದೆ. ಪಟ್ಟಣದ ಬಹುತೇಕ ಬಡಾವಣೆಗಳು ಪ್ರವಾಹದಿಂದ ಸಂಪೂರ್ಣ ಮುಚ್ಚಿ ಹೋಗಿರುವದಕ್ಕೆ ಇದೇ ಪ್ರಮುಖ ಕಾರಣವಾಗಿದೆ ಎಂಬದು ನೊಂದ ಸಂತ್ರಸ್ತರ ಆರೋಪವಾಗಿದೆ.