ಕೂಡಿಗೆ, ಆ. 12: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾವೇರಿ-ಹಾರಂಗಿ ನದಿ ನೀರಿನ ಮಟ್ಟ ಹೆಚ್ಚಿದ್ದರಿಂದ ಕುಶಾಲನಗರ ಹೋಬಳಿ ವ್ಯಾಪ್ತಿಯ 20ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಎಕರೆಯಲ್ಲಿ ಕೃಷಿ ಮಾಡಿದ್ದ ಭೂಮಿಯು ಜಲಾವೃತಗೊಂಡು ಸಂಪೂರ್ಣ ಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ.

ರೈತರು ಕಳೆದ ಒಂದು ತಿಂಗಳ ಹಿಂದೆ ಮಳೆಯಿಲ್ಲದೆ, ಬೆಳೆ ಮಾಡಲು ನೀರಿಲ್ಲದೆ ಕಷ್ಟದಲ್ಲಿಯೇ ಧೈರ್ಯ ತೋರಿ ಅಲ್ಪ ಸ್ವಲ್ಪ ಮಳೆಯಲ್ಲಿಯೇ ಬೆಳೆ ಬೆಳೆಯಲು ಮುಂದಾಗಿದ್ದರು. ನಂತರದ ದಿನಗಳಲ್ಲಿ ಮಳೆ ಪ್ರಮಾಣ ಒಂದು ವಾರದಲ್ಲಿಯೇ ಹೆಚ್ಚಾದ ಪರಿಣಾಮ ಹಾರಂಗಿ ಅಣೆಕಟ್ಟೆ ಭರ್ತಿಯಾಗಿ, ಕಾವೇರಿ ಮತ್ತು ಹಾರಂಗಿ ನದಿ ನೀರು ಹೆಚ್ಚಳವಾದ ಪರಿಣಾಮ ನೀರು ರೈತರ ಜಮೀನಿಗೆ ನುಗ್ಗಿ ಸಂಪೂರ್ಣವಾಗಿ ಆವರಿಸಿಕೊಂಡಿತು. ಜಲಾವೃತಗೊಂಡ ಹಿನ್ನೆಲೆಯಲ್ಲಿ ಜಮೀನಿನ ಜೊತೆಯಲ್ಲಿ ಅನೇಕ ಮನೆಗಳು ಕುಸಿದುಬಿದ್ದಿವೆ, ದನಕರುಗಳು ನೀರಿನಲ್ಲಿ ತೇಲಿ ಹೋಗಿವೆ.

ಕುಶಾಲನಗರ ಹೋಬಳಿ ವ್ಯಾಪ್ತಿಯ ಮುಳ್ಳುಸೋಗೆ, ಕೂಡ್ಲೂರು, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಹಾರಂಗಿ ಸಮೀಪದ ಹುದುಗೂರು, ಮದಲಾಪುರ, ಮಲ್ಲೇನಹಳ್ಳಿ ವ್ಯಾಪ್ತಿಗಳಲ್ಲಿ ಹಾರಂಗಿ-ಕಾವೇರಿ ಎರಡೂ ನದಿಗಳ ನೀರು ಸಂಗಮವಾಗಿ ಹೆಚ್ಚಿನ ಪ್ರಮಾಣದ ನೀರು ಅಪಾಯ ಮಟ್ಟದಲ್ಲಿ ಹರಿದು ವ್ಯವಸಾಯ ಮಾಡಿದ್ದ ಜಮೀನುಗಳಿಗೆ ನುಗ್ಗಿ ಭಾರೀ ನಷ್ಟವನ್ನುಂಟು ಮಾಡಿದೆ. ಈ ವ್ಯಾಪ್ತಿಯಲ್ಲಿ ಶುಂಠಿ, ಜೋಳ, ಕೇನೆ, ಸಿಹಿಗೆಣಸು, ಬಾಳೆ, ಅಡಿಕೆ ಬೇಸಾಯವು ಮೂರ್ನಾಲ್ಕು ದಿನಗಳವರೆಗೆ ಬೆಳೆಗಳು ಸಂಪೂರ್ಣ ನೀರಿನಲ್ಲಿಯೇ ಮುಳುಗಿದ್ದ ಪರಿಣಾಮ ಸಂಪೂರ್ಣ ಕೊಳೆತು ಹೋಗಿದೆ. ಇದರ ಜೊತೆಯಲ್ಲಿ ನಾಟಿ ಮಾಡಿದ ಭತ್ತದ ಸಸಿಗಳನ್ನು ಹಾಗೂ ಸಸಿಮಡಿಗಳನ್ನು ನೀರು ಕೊಚ್ಚಿಕೊಂಡು ಹೋಗಿದೆ. ನೀರಿನ ಮಟ್ಟ ಇಳಿಕೆಯಾದ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನುಗಳತ್ತ ಧಾವಿಸಿದ್ದು, ನಾಟಿ ಮಾಡಿದ ಸಸಿಗಳೂ, ಸಸಿ ಮಡಿಗಳು ಇನ್ನಿತರ ಬೆಳೆಗಳು ಕೊಚ್ಚಿ ಹೋಗಿರುವದನ್ನು ನೋಡಿ ಆತಂಕಕ್ಕೊಳಗಾಗಿದ್ದಾರೆ.

-ಕೆ.ಕೆ.ಎನ್. ಶೆಟ್ಟಿ