ಕೂಡಿಗೆ, ಆ. 12: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಕಾವೇರಿ-ಹಾರಂಗಿ ನದಿ ನೀರು ಸಂಗಮವಾಗಿ ಹರಿಯುವ ಸ್ಥಳವಾಗಿರುವದರಿಂದ ಭಾರೀ ಮಳೆಯಿಂದಾಗಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಕಣಿವೆಯ ತೂಗುಸೇತುವೆಯು ಹಾನಿಯಾಗಿ ಮುರಿದು ಹೋಗಿದೆ.
ಈ ತೂಗುಸೇತುವೆಯು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ 13 ಗ್ರಾಮಗಳ ಸಂಪರ್ಕ ಸೇತುವೆಯಾಗಿದ್ದು, ಕೊಡಗು ಮತ್ತು ಮೈಸೂರು ಜಿಲ್ಲೆಯ ಗಡಿ ಪ್ರದೇಶದ ಸಂಪರ್ಕದ ದಾರಿಯಾಗಿದೆ. ಪಿರಿಯಾಪಟ್ಟಣ ತಾಲೂಕಿನ ಹಲವಾರು ವಿದ್ಯಾರ್ಥಿಗಳು, ಕಾರ್ಮಿಕರು ಈ ಸೇತುವೆಯ ಮೂಲಕ ಕೊಡಗು ಜಿಲ್ಲೆಯ ಕಾಲೇಜುಗಳಿಗೆ ಹಾಗೂ ಕೂಡ್ಲೂರು ಕೈಗಾರಿಕಾ ಬಡಾವಣೆಯ ಕೈಗಾರಿಕಾ ಕೇಂದ್ರಗಳಿಗೆ ಕಾರ್ಮಿಕರು ದಿನಂಪ್ರತಿ ಬರುತ್ತಾರೆ. ಆದರೆ, ಇದೀಗ ಅತಿಯಾದ ನೀರಿನ ಹರಿಯುವಿಕೆಯಿಂದ ತೂಗುಸೇತುವೆಯು ಹಾನಿಯಾಗಿ ಎರಡು ಭಾಗಗಳಲ್ಲಿಯೂ ಮುರಿದು ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ.
ಕಳೆದ ಬಾರಿಯೂ ಪ್ರಕೃತಿ ವಿಕೋಪದ ಸಂದರ್ಭ ಭಾರೀ ನೀರು ಹರಿದ ಪರಿಣಾಮ ತೂಗುಸೇತುವೆಯ ಒಂದು ಭಾಗ ಹಾನಿಯಾಗಿತ್ತು. ಹಾನಿಯಾಗಿದ್ದ ತೂಗುಸೇತುವೆಯನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಒಂದು ವಾರದಲ್ಲಿ ದುರಸ್ತಿಗೊಳಿಸಿ, ಸಂಪರ್ಕ ಸೇತುವೆಯನ್ನು ಬಳಕೆಗೆ ಒದಗಿಸಿದ್ದರು.
ಅದೇ ರೀತಿ ಈ ಬಾರಿಯೂ ಪ್ರಕೃತಿ ವಿಕೋಪದಲ್ಲಿ ನೀರು ಹೆಚ್ಚಾಗಿ ಎರಡೂ ಭಾಗಗಳಲ್ಲಿ ಕಬ್ಬಿಣದ ಸಲಾಕೆಗಳು ಮುರಿದು, ಸೇತುವೆಗೆ ಅಳವಡಿಸಿದ್ದ ಕಬ್ಬಿಣದ ಮೆಟ್ಟಿಲುಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಪಿರಿಯಾಪಟ್ಟಣ ತಾಲೂಕಿನ ಗ್ರಾಮಸ್ಥರಿಗೆ ಕೊಡಗು ಜಿಲ್ಲೆಯ ಸಂಪರ್ಕ ಅತಿ ಹೆಚ್ಚು ಅವಶ್ಯಕ ವಾಗಿರುವದರಿಂದ, ಕಳೆದ ಬಾರಿ ಗಿಂತಲೂ ಈ ಬಾರಿ ಸೇತುವೆಯು ತೀರಾ ಹಾಳಾಗಿರುವದರಿಂದ ಪಿರಿಯಾಪಟ್ಟಣ ಕ್ಷೇತ್ರದ ಶಾಸಕರೂ ಸಹ ಇದರತ್ತ ಗಮನಹರಿಸಿ ಮಲೆನಾಡು ಅಭಿವೃದ್ಧಿ ಯೋಜನೆಯಡಿಯಲ್ಲಿ ಶೀಘ್ರವಾಗಿ ದುರಸ್ತಿ ಪಡಿಸಲು ಪಿರಿಯಾಪಟ್ಟಣ ತಾಲೂಕಿನ ಗಡಿ ಭಾಗದ ಗ್ರಾಮಗಳಾದ ದೊಡ್ಡಕಮರವಳ್ಳಿ, ದಿಂಡಗಾಡು, ಮಂಟಿಕೊಪ್ಪಲು ವ್ಯಾಪ್ತಿಯ 12 ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಹಾನಿಯಾಗಿರುವ ತೂಗುಸೇತುವೆ ಯನ್ನು ಪರಿಶೀಲಿಸಿ, ಶೀಘ್ರವಾಗಿ ಕ್ರಮಕೈಗೊಳ್ಳುವದಾಗಿ ತಿಳಿಸಿದ್ದಾರೆ. ಅವರು ಕೂಡಿಗೆಯ ಜಲಾವೃತಗೊಂಡ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿ, ನದಿ ನೀರಿನ ಮಟ್ಟ ಕಡಿಮೆಯಾದ ತಕ್ಷಣ ಸಂಬಂಧಪಟ್ಟ ತಜ್ಞ ಇಂಜಿನಿಯರ್ಗಳಿಂದ ಪರೀಕ್ಷಿಸಿ, ಉತ್ತಮವಾದ ರೀತಿಯಲ್ಲಿ ಸರಿಪಡಿಸಲಾಗುವದು. ಶೀಘ್ರದಲ್ಲೆ ದುರಸ್ತಿ ಕಾಮಗಾರಿ ನಡೆಸಲು ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.
-ಕೆ.ಕೆ. ನಾಗರಾಜಶೆಟ್ಟಿ