ಸಿದ್ದಾಪುರ, ಆ. :13 ಮಹಾ ಮಳೆಯ ಪ್ರವಾಹದಿಂದ ನದಿ ದಡದ ನೂರಾರು ಮನೆಗಳು ಕುಸಿದಿರುತ್ತದೆ. ಇಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯ ಪ್ರವಾಹ ಏರಿಕೆಯಾಗಿ ಸಿದ್ದಾಪುರದ ಕರಡಿಗೋಡು, ಗುಹ್ಯ ಕಕ್ಕಟ್ಟುಕಾಡು, ಹೊಸಗದ್ದೆ, ಹಾಗೂ ನೆಲ್ಯಹುದಿಕೇರಿಯ ಬೆಟ್ಟದ ಕಾಡು, ಕುಂಬಾರಗುಂಡಿ, ಬರಡಿ, ಚರ್ಚ್ ಸೈಡ್ ಭಾಗದಲ್ಲಿ ಮನೆಗಳು ಕುಸಿದಿವೆ.
ಸರಣಿ ಮನೆಯ ಕುಸಿತದಿಂದಾಗಿ ನದಿ ದಡದ ನಿವಾಸಿಗಳು ಭಯಭೀತರಾಗಿದ್ದಾರೆ. ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪುರಂದರ ಅವರ ಮಾರ್ಗದರ್ಶನದಲ್ಲಿ ಅಮ್ಮತ್ತಿ ಹೋಬಳಿಯ ಕಂದಾಯ ಪರಿವೀಕ್ಷಕ ನಾಗೇಶರಾವ್, ಗ್ರಾಮಲೆಕ್ಕಿಗ ಓಮಪ್ಪ ಬಣಾಕರ್, ಸಹಾಯಕ ಕೃಷ್ಣ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳ ಮಾಹಿತಿ ಪಡೆಯುತ್ತಿದ್ದಾರೆ.
ನೆಲ್ಯಹುದಿಕೇರಿ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿ ನೂರಾರು ಮನೆಗಳು ಕುಸಿದಿದ್ದು ಅಪಾರ ನಷ್ಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಮಾರ್ಗದರ್ಶನದಲ್ಲಿ ಕುಶಾಲನಗರ ಕಂದಾಯ ಪರಿವೀಕ್ಷಕ ಮಧುಸೂದನ್, ನೋಡಲ್ ಅಧಿಕಾರಿ ಕುಮಾರ್, ಗ್ರಾಮಲೆಕ್ಕಿಗ ಸಂತೋಷ್ ಹಾನಿಗೊಳಗಾದ ಮನೆಗಳ ಪಟ್ಟಿ ತಯಾರಿಸುತ್ತಿದ್ದಾರೆ. ಅಲ್ಲದೆ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಈ ಭಾಗದಲ್ಲಿ ಕೃಷಿ ಗದ್ದೆಗಳು, ಸಾಕುಪ್ರಾಣಿಗಳಿಗೂ ತೊಂದರೆಯಾಗುತ್ತಿದೆ. ಮಹಾಮಳೆಯ ಪ್ರವಾಹಕ್ಕೆ ಸಿಲುಕಿ ಕಟ್ಟೆಮಾಡು ಗ್ರಾಮದ ಮುತ್ತ ಎಂಬವರ ಸಾವಿರಾರು ಹುಲ್ಲಿನ ಕಂತೆಗಳು ನೀರಿನಲ್ಲಿ ತೇಲಿ ಹಾನಿಯಾಗಿರುತ್ತವೆ. ಅವರ ಜಾನುವಾರುಗಳನ್ನು ಅರೆಕಾಡು ನಿವಾಸಿ ತೋಡಿಯಂಡ ಕುಶಾಲಪ್ಪ ತಮ್ಮ ಕೊಟ್ಟಿಗೆಯಲ್ಲಿ ರಕ್ಷಣೆ ಮಾಡಿ ಆಶ್ರಯ ನೀಡಿದ್ದಾರೆ. ಕೊಂಡಂಗೇರಿ ಸಮೀಪದ ಐಕೊಳದ ಮಿತ್ತೂರು ಸುಬ್ರಮಣಿ ಅವರ ಬಾಳೆಕೃಷಿ, ಕಾಫಿ ಫಸಲು ನಷ್ಟಗೊಂಡಿವೆ. ಹಾನಿಗೊಳಗಾದ ಪ್ರದೇಶಗಳ ಜನರ ಸಮಸ್ಯೆಗಳಿಗೆ ಜಿ.ಪಂ., ತಾಪಂ. ಹಾಗೂ ಸ್ಥಳೀಯ ಗ್ರಾ.ಪಂ. ಸದಸ್ಯರುಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನೆ ನಡೆಸಿದ ನಿವಾಸಿಗಳು ತಮಗೆ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.