ವೀರಾಜಪೇಟೆ, ಆ. 12: ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಮಾನಸಿಕ ಖಿನ್ನತೆ ಮತ್ತು ಮಾದಕ ವಸ್ತುಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು.

ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥ ಡಾ. ರೂಪೇಶ್ ಗೋಪಾಲ್, ಮಾನಸಿಕ ಖಿನ್ನತೆ ಮತ್ತು ಒತ್ತಡ ಇವುಗಳ ಬಗ್ಗೆ ಮಾಹಿತಿ ನೀಡಿದರೆ, ವೃತ್ತ ನಿರೀಕ್ಷಕ ಕ್ಯಾತೆಗೌಡ ಮಾದಕ ವಸ್ತುಗಳಿಂದ ಆಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಾಂಶುಪಾಲೆ ಎನ್.ಕೆ. ಜ್ಯೋತಿ ವಹಿಸಿದ್ದರು. ಈ ಸಂದರ್ಭ ವೀರಾಜಪೇಟೆ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಮತ್ತು ಹಿರಿಯ ಉಪನ್ಯಾಸಕ ಅಂಥೋನಿ ಅಲ್ವಾರಿಸ್, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.

ಉಪನ್ಯಾಸಕ ಎಂ. ದಿನೇಶ್ ಮತ್ತು ಹೆಚ್.ಆರ್. ದಮಯಂತಿ ಅನಿಸಿಕೆ ವ್ಯಕ್ತಪಡಿಸಿದರು. ಜಾಗೃತಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಚಕ್ರಪಾಣಿ ಮತ್ತು ತಂಡದ ವತಿಯಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು. ಕಾರ್ಯ ಕ್ರಮದ ಸಂಯೋಜಕ ಸಿ.ವಿ. ವಿಶ್ವನಾಥ್ ಸ್ವಾಗತಿಸಿ, ಉಪನ್ಯಾಸಕಿ ಗೌರಿ ನಿರೂಪಿಸಿದರೆ, ದಮಯಂತಿ ವಂದಿಸಿದರು.