ಗೋಣಿಕೊಪ್ಪಲು, ಆ. 12: ಮಳೆ ಹಾನಿ ಸಂತ್ರಸ್ತರ ಕೇಂದ್ರಗಳಿಗೆ ಬೆಂಗಳೂರಿನ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಕೊಡಗಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಅಗತ್ಯವಿದ್ದ ಆಹಾರ ಧಾನ್ಯ ಹಾಗೂ ವಸ್ತ್ರ ಮತ್ತಿತರ ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು.ಬೆಂಗಳೂರಿನಿಂದ ಆಗಮಿಸಿದ ಆರ್. ಅಶೋಕ್ ನೇತೃತ್ವದ ತಂಡ ಗೋಣಿಕೊಪ್ಪಲಿನ ಆರ್‍ಎಂಸಿ ಆವರಣದಲ್ಲಿ ಬಂದು ಸಂತ್ರಸ್ತರೊಂದಿಗೆ ಮಾತು ಕತೆ ನಡೆಸಿದರು. ತಮ್ಮೊಂದಿಗೆ ತಂದಿದ್ದ ಅಕ್ಕಿ. ಬೇಳೆ, ಬಟ್ಟೆ, ಸೋಪು ಮುಂತಾದ ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸಿದರು. ಬೆಕ್ಕೆಸೊಡ್ಲೂರು, ಬಾಳೆಲೆ, ಕಾನೂರು, ನಿಟ್ಟೂರು, ಕಾರ್ಮಾಡು ಶಾಲೆಗಳಲ್ಲಿ ನೆಲೆಸಿರುವ ಸಂತ್ರಸ್ತರನ್ನು ಭೇಟಿ ಮಾಡಿ ಅವರಿಗೆ ಸ್ಥೈರ್ಯ ತುಂಬಿದರು. ಕಾರ್ಮಾಡು ಗಿರಿಜನ ಆಶ್ರಮ ಶಾಲೆಯಲ್ಲಿ ನೆಲೆಸಿರುವ 145 ನಿರಾಶ್ರಿತರಿಗೆ ಊಟ ಬಡಿಸಿದ ಅಶೋಕ್, ನೆರೆಪೀಡಿತ ಜನರಿಗೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಮುಂದೆ ಸುರಕ್ಷಿತ ಸ್ಥಳದಲ್ಲಿ ಮನೆ ನಿರ್ಮಿಸಿಕೊಡಲಾಗುವದು ಎಂದರು.

ಕಾವೇರಿ ನಾಡಿನ ಜನತೆ ಸಂಕಷ್ಟದಲ್ಲಿರುವದು ನೋವು ತಂದಿದೆ. ಅವರ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ. ನಿಮ್ಮ ನೋವನ್ನು ನೀಗಿಸುವದು ತಮ್ಮ ಕರ್ತವ್ಯವಾಗಿದೆ. ರಾಜ್ಯದ 17 ಜಿಲ್ಲೆಗಳು ಪ್ರವಾಹಕ್ಕೆ ಒಳಗಾಗಿವೆ. ಎಲ್ಲ ಸಮಸ್ಯೆಗಳನ್ನು ಮುನ್ನುಗ್ಗಿ ನೀಗಿಸಲಾಗುವದು ಎಂದು ಭರವಸೆ ನೀಡಿದರು.

ಈ ಸಂದರ್ಭ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಎಂ. ಕೃಷ್ಣಪ್ಪ, ಸಂಸದ ಪ್ರತಾಪ್ ಸಿಂಹ,

(ಮೊದಲ ಪುಟದಿಂದ) ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ, ಸದಸ್ಯ ಶಶಿ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್, ತಾಲೂಕು ಘಟಕದ ಅಧ್ಯಕ್ಷ ಅರುಣ್ ಭೀಮಯ್ಯ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಸದಸ್ಯರಾದ ಗಣೇಶ್, ಜಯ ಪೂವಯ್ಯ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ, ಸದಸ್ಯರಾದ ಕೆ.ಪಿ.ಬೋಪಣ್ಣ. ರತಿ ಅಚ್ಚಪ್ಪ, ಮಾಜಿ ಅಧ್ಯಕ್ಷ ರಾಜೇಶ್, ಕಿಲನ್ ಗಣಪತಿ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್, ಮುಖಂಡರಾದ ಕೆ.ಬಿ.ಗಿರೀಶ್ ಗಣಪತಿ, ಸುಳ್ಳಿಮಾಡ ದೀಪಕ್, ಅರಮಣಮಾಡ ರಂಜನ್ ಚಂಗಪ್ಪ, ಚೆಕ್ಕೇರ ಸೂರಿ ಅಯ್ಯಪ್ಪ, ಅಳಮೇಂಗಡ ಬೋಸ್ ಮಂದಣ್ಣ, ರಘು ನಾಣಯ್ಯ, ಮಂಜು, ಮಡಿಕೇರಿ ಆರ್‍ಎಂಸಿ ಸದಸ್ಯ ಮೇದಪ್ಪ, ಗೋಣಿಕೊಪ್ಪಲು ಆರ್‍ಎಂಸಿ ಅಧ್ಯಕ್ಷ ವಿನು ಚಂಗಪ್ಪ, ಉಪಾಧ್ಯಕ್ಷ ಸುಬ್ರಮಣಿ, ರಾಣಿ ನಾರಾಯಣ ಮೊದಲಾದವರು ಹಾಜರಿದ್ದರು. -ಎನ್.ಎನ್.ದಿನೇಶ್