ಸೋಮವಾರಪೇಟೆ,ಆ.12: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದೀಗ ಅಪಾಯಕಾರಿ ಸ್ಥಿತಿಯಲ್ಲಿದ್ದು, ಸೇತುವೆಯ ಎರಡೂ ಬದಿ ಕುಸಿತ ಉಂಟಾಗಿದೆ.
ಪುಷ್ಪಗಿರಿ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಹಂಚಿನಳ್ಳಿ ಹೊಳೆ ಪ್ರವಾಹ ಸದೃಶದಂತೆ ಹರಿಯುತ್ತಿದ್ದು, ಮಲ್ಲಳ್ಳಿ ಗ್ರಾಮ ಸೇರಿದಂತೆ ಜಲಪಾತಕ್ಕೆ ತೆರಳುವ ಕಾಂಕ್ರೀಟ್ ರಸ್ತೆಗೆ ಕಳೆದ 4 ವರ್ಷಗಳ ಹಿಂದೆ ನಿರ್ಮಿಸಿದ್ದ ನೂತನ ಸೇತುವೆಗೆ ಇದೀಗ ಗಂಡಾಂತರ ಎದುರಾಗಿದೆ.
ಕಳೆದೆರಡು ದಿನಗಳ ಹಿಂದೆ ಭಾರೀ ಮಳೆಗೆ ಸೇತುವೆಯ ಮೇಲ್ಭಾಗ ಹೊಳೆ ನೀರು ಹರಿದಿದ್ದು, ಇದರ ಪರಿಣಾಮ ಹಂಚಿನಳ್ಳಿಯಿಂದ ತೆರಳುವ ಮಾರ್ಗದಲ್ಲಿ ಎಡಭಾಗಕ್ಕೆ ಹಾಗೂ ಜಲಪಾತದಿಂದ ಬರುವ ಮಾರ್ಗದ ಬಲಭಾಗದಲ್ಲಿ ಸೇತುವೆಗೆ ಹಾನಿ ಉಂಟಾಗಿದೆ. ಬದಿಯಲ್ಲಿ ಹಾಕಿದ್ದ ಮಣ್ಣು, ಕಲ್ಲುಗಳು ನೀರಿನ ಕೊರೆತಕ್ಕೆ ಹೊರಬಂದಿದ್ದು, ಭಾರೀ ವಾಹನಗಳು ಸಂಚರಿಸಿದರೆ ಸೇತುವೆಯೇ ಕುಸಿಯುವ ಭೀತಿಯಲ್ಲಿದೆ.
ಪುಷ್ಪಗಿರಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಮಲ್ಲಳ್ಳಿ ಜಲಪಾತ ಮೈದುಂಬಿ ಹರಿಯುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವಾರಾಂತ್ಯದ ದಿನಗಳಲ್ಲಿ ಜಲಪಾತವನ್ನು ವೀಕ್ಷಿಸಲು ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದು, ಬೃಹತ್ ವಾಹನಗಳು ಈ ಸೇತುವೆಯ ಮೇಲೆ ಸಂಚರಿಸಿದರೆ ಅಪಾಯ ನಿಶ್ಚಿತ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.
ಸೇತುವೆಯ ತಲಭಾಗದಲ್ಲಿ ಕೊರೆತ ಉಂಟಾಗಿದ್ದು, ಹೆಚ್ಚು ಭಾರದ ವಾಹನ ಸಂಚರಿಸಿದರೆ ಕುಸಿತ ಕ್ಕೊಳಗಾಗುವ ಸಂಭವವಿದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ. ತಕ್ಷಣ ಇಲ್ಲಿ ದುರಸ್ತಿ ಕಾರ್ಯ ನಡೆಸುವ ಮೂಲಕ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕೆಂದು ಸ್ಥಳೀಯರಾದ ಪೊನ್ನಪ್ಪ ಒತ್ತಾಯಿಸಿದ್ದಾರೆ.
- ವಿಜಯ್