ಗೋಣಿಕೊಪ್ಪ ವರದಿ, ಆ. 13: ಭಾರತೀಯ ಜನತಾ ಪಾರ್ಟಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸದಸ್ಯತ್ವ ಹೆಚ್ಚಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ಬಿಜೆಪಿ ಸದಸ್ಯತ್ವ ಅಭಿಯಾನದ ಕೊಡಗು ಉಸ್ತುವಾರಿ ತೇಜಸ್ವಿ ರಮೇಶ್ ಹೇಳಿದರು. ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ಬಿಜೆಪಿ ವತಿಯಿಂದ ಆಯೋಜಿಸಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸದಸ್ಯತ್ವ ಹೆಚ್ಚಿಸಲು ಕಾರ್ಯಕರ್ತರು ಹೆಚ್ಚಿನ ಕಾಳಜಿ ವಹಿಸಬೇಕು. ಆ ಮೂಲಕ ಜಿಲ್ಲೆಯಲ್ಲಿ ಹೆಚ್ಚು ಬಿಜೆಪಿ ಸದಸ್ಯರನ್ನು ಹೊಂದಲು ಯೋಜನೆ ರೂಪಿಸುವಂತೆ ಕರೆ ನೀಡಿದರು. ತಾಲೂಕು ಮಟ್ಟದ ಬಿಜೆಪಿ ಕಾರ್ಯಕರ್ತರು, ಯುವ ಮೋರ್ಚಾ ಪ್ರಮುಖರು ಪಾಲ್ಗೊಂಡಿದ್ದರು. ಈ ಸಂದರ್ಭ ವೀರಾಜಪೇಟೆ ಬಿಜೆಪಿ ಕ್ಷೇತ್ರ ಅಧ್ಯಕ್ಷ ಅರುಣ್ ಭೀಮಯ್ಯ, ಪ್ರಮುಖರಾದ ಲೋಕೇಶ್, ರಘು ನಾಣಯ್ಯ, ನೆಲ್ಲೀರ ಚಲನ್, ಕಿಲನ್ ಗಣಪತಿ, ಸಿ.ಕೆ. ಬೋಪಣ್ಣ, ಶಶಿ ಸುಬ್ರಮಣಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮತ್ರಂಡ ಪ್ರವೀಣ್ ಉಪಸ್ಥಿತರಿದ್ದರು.