ಕುಶಾಲನಗರ, ಜು. 12: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ಪ್ರಜ್ಞೆ ಮೂಡಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ಮುರಳೀಧರ್ ಹೇಳಿದರು.

ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ತಾಲೂಕು ಮಟ್ಟದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಘಟಕಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳಾಗಿ ಎನ್‍ಎಸ್‍ಎಸ್, ಎನ್‍ಸಿಸಿಯಂತಹ ಸೇವಾ ಯೋಜನೆಗಳೊಂದಿಗೆ ಎಸ್‍ಪಿಸಿ ಕೂಡ ಸೇರ್ಪಡೆಗೊಂಡಿದ್ದು ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಗಳ ಅರಿವು, ಶಿಸ್ತು ಮೂಡಿಸಲು ಇಂತಹ ಯೋಜನೆಗಳಿಂದ ಸಾಧ್ಯ ಎಂದರು.

ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಮಾತನಾಡಿ, ಶಿಕ್ಷಣ ಕ್ರಮದಲ್ಲಿ ಹೊಸ ಹೊಸ ಪ್ರಯೋಗಗಳು, ಯೋಜನೆಗಳು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ನೆರವಾಗುತ್ತದೆ. ಶೈಕ್ಷಣಿಕ ಹಂತದಿಂದಲೇ ವಿದ್ಯಾರ್ಥಿಗಳು ಜೀವನದ ಎಲ್ಲಾ ಸ್ತರಗಳಲ್ಲೂ ಶಿಸ್ತನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿಸಬೇಕಿದೆ ಎಂದು ಕರೆ ನೀಡಿದರು.

ಸಮುದಾಯ ಪೊಲೀಸ್ ಅಧಿಕಾರಿ ಸದಾಶಿವಯ್ಯ ಎಸ್ ಪಲ್ಲೇದ್ ಪ್ರಾಸ್ತಾವಿಕ ನುಡಿಗಳಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರಾಜ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪೊಲೀಸ್ ಠಾಣಾಧಿಕಾರಿಗಳಾದ ಜಗದೀಶ್, ನಂದೀಶ್, ಜಯರಾಂ ಮಾತನಾಡಿದರು.

ಸೋಮವಾರಪೇಟೆ ತಾಲೂಕಿನ ಕುಶಾಲನಗರ, ಸುಂಟಿಕೊಪ್ಪ, ಶಿರಂಗಾಲ ಪ್ರೌಢಶಾಲೆಗಳ ಎಸ್‍ಪಿಸಿ ಘಟಕಗಳಿಗೆ ಚಾಲನೆ ನೀಡಲಾಯಿತು. ಕಾಲೇಜು ಉಪ ಪ್ರಾಂಶುಪಾಲೆ ಬಿ.ಬಿ. ಸಾವಿತ್ರಿ, ಸುಂಟಿಕೊಪ್ಪ ಪ.ಪೂ. ಕಾಲೇಜು ಉಪ ಪ್ರಾಂಶುಪಾಲ ಬಾಲಕೃಷ್ಣ, ದೈಹಿಕ ಶಿಕ್ಷಣ ಅಧೀಕ್ಷಕ ವೆಂಕಟೇಶ್, ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್, ಶಿಕ್ಷಕ ಮಹೇಂದ್ರ, ತರಬೇತುದಾರ ರವಿ, ಹಾಸನದ ಮುದ್ದುರಾಜ್, ಶಿವರಾಜ್ ಮಹದೇವ್ ಮತ್ತಿತರರು ಇದ್ದರು.