ಚೆಟ್ಟಳ್ಳಿ, ಆ. 12: ಸಮೀಪದ ಕಂಡಕರೆಯ ಎವರ್ಶೈನ್ ಯುವಕ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ 17 ವಯಸ್ಸಿನ ವಯೋಮಿತಿ ಒಳಗಿನ ಕಾಲ್ಚೆಂಡು ಪಂದ್ಯಾಟದಲ್ಲಿ ಅಮಿಟಿ ಗದ್ದೆಹಳ್ಳ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ. ರಾಯಲ್ ಎಫ್ಸ್ ಕಂಡಕರೆ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಜಿದ್ದಾಜಿದ್ದಿನ ಫೈನಲ್ ಪಂದ್ಯಾಟದ ಪ್ರಥಮಾರ್ಧದಲ್ಲಿ ರಾಯಲ್ ಎಫ್ಸ್ ತಂಡವು ಆಕ್ರಮಣಕಾರಿ ಆಟಕ್ಕೆ ಮುಂದಾದರೂ ಗೋಲು ಗಳಿಸುವಲ್ಲಿ ವಿಫಲವಾಯಿತು. ಅಮಿಟಿ ಗದ್ದೆಹಳ್ಳ ತಂಡವು ಅತ್ಯುತ್ತಮ ಪಾಸ್ ಮೂಲಕ 2-0 ಗೋಲುಗಳ ಅಂತರದಿಂದ ರಾಯಲ್ ಎಫ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.

ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ರಾಯಲ್ ಎಫ್.ಸಿ ಹಾಗೂ ಫ್ಯಾನ್ಸಿ ಕಂಡಕರೆ ತಂಡಗಳ ನಡುವೆ ನಡೆಯಿತು.

ರಾಯಲ್ ಎಫ್.ಸಿ. ತಂಡದ ಮುನ್ನಡೆ ಆಟಗಾರ ದರ್ಶನ್ ಅವರ ಎರಡು ಗೋಲುಗಳ ನೆರವಿನಿಂದ 2-1 ಗೋಲುಗಳ ಅಂತರದಿಂದ ಗೆಲವು ಸಾಧಿಸಿತು. ಎರಡನೇ ಸೆಮಿಫೈನಲ್ ಪಂದ್ಯವು ಆತಿಥೇಯ ಎವರ್ಶೈನ್ ಎಫ್.ಸಿ ಹಾಗೂ ಅಮಿಟಿ ಗದ್ದೆಹಳ್ಳ ತಂಡಗಳ ನಡುವೆ ನಡೆಯಿತು.

ಅಮಿಟಿ ತಂಡದ ಉಸಾಮ್ ಹಾಗೂ ಸಾಧಿಕ್ ಅವರ ಅಮೋಘ ಆಟದಿಂದ ಅಮಿಟಿ ತಂಡವು 3-0 ಗೋಲುಗಳ ಅಂತರದಿಂದ ಆತಿಥೇಯ ತಂಡವನ್ನು ಮಣಿಸಿತು.

ಪಂದ್ಯಾಟದಲ್ಲಿ ಒಟ್ಟು 15 ತಂಡಗಳು ಭಾಗವಹಿಸಿದ್ದು, ರಾಯಲ್ ಎಫ್.ಸಿ. ತಂಡದ ರಾಶಿದ್ ಬೆಸ್ಟ್ ಗೋಲ್ ಕೀಪರ್ ಹಾಗೂ ಅಮಿಟಿ ತಂಡದ ಸಾಧಿಕ್ ಬೆಸ್ಟ್ ಆಟಗಾರ ಪ್ರಶಸ್ತಿಯನ್ನು ಪಡೆದರು. ಕ್ರೀಡಾಕೂಟದ ತೀರ್ಪುಗಾರರಾಗಿ ಇಬ್ರಾಹಿಂ, ನೌಷಾದ್, ಇರ್ಷಾದ್ ಕಾರ್ಯನಿರ್ವಹಿಸಿದರು. ರಾಯಲ್ ಎಫ್.ಸಿ ತಂಡದ ಕೋಚ್ ಆಗಿ ಇಸ್ಮಾಯಿಲ್ ಕಂಡಕರೆ ಅವರು ಕಾರ್ಯನಿರ್ವಹಿಸಿದರು.

ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಎವರ್ಶೈನ್ ಯುವಕ ಸಂಘದ ಮಾಜಿ ಅಧ್ಯಕ್ಷ ಆಲಿ, ಜಂಶಾದ್, ರಶೀದ್, ಪ್ರಶಾಂತ್, ಹರಿನಾರಾಯಣ, ಫಾರೂಖ್, ಸಮೀರ್, ಹಕೀಂ, ಸಲ್ಮಾನ್, ಸುಫೈಲ್ ಇದ್ದರು.