ಸೋಮವಾರಪೇಟೆ, ಆ. 13: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದ ಕ್ರಮವನ್ನು ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷ ಖಂಡಿಸಿದ್ದು, ಕೇಂದ್ರದ ನಿಲುವನ್ನು ವಿರೋಧಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ.

ಸಂವಿಧಾನದತ್ತವಾಗಿ ನೀಡಿರುವ ಹಕ್ಕನ್ನು ಕೇಂದ್ರ ಸರ್ಕಾರದ ಮೋದಿ ಮತ್ತು ಅಮಿತ್ ಶಾ ಜೋಡಿ ಕಸಿದುಕೊಂಡು, ಜಮ್ಮು ಮತ್ತು ಕಾಶ್ಮೀರದ ಜನತೆಯ ಸ್ವಾಯತ್ತತೆಯ ಮೇಲೆ ಧಾಳಿ ಮಾಡಿದೆ. ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್ ಆರೋಪಿಸಿದ್ದಾರೆ.

ಅಲ್ಲಿನ ವಿಧಾನ ಸಭೆಯನ್ನು ವಿಸರ್ಜಿಸಿ, ರಾಜಕೀಯ ನಾಯಕರಿಗೆ ದಿಗ್ಬಂಧನ ವಿಧಿಸಿ, ಹೋರಾಟಗಾರರನ್ನು ಬಂಧಿಸಿ, ಸೈನ್ಯವನ್ನು ನಿಯೋಜಿಸಿ ಇಂತಹ ಕ್ರಮವನ್ನು ಕೈಗೊಂಡಿರುವದು ಖಂಡನೀಯ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಡಿ.ಎಸ್. ನಿರ್ವಾಣಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಸಂಘಟನೆಯ ಪದಾಧಿಕಾರಿಗಳು, ಶಿರಸ್ತೇದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಹೆಚ್.ಇ. ಸಣ್ಣಪ್ಪ, ಹೆಚ್.ಎಂ. ರಘು, ಪದಾಧಿಕಾರಿಗಳಾದ ಪಾಪು, ಸುಂದರ, ಬಾಬು, ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.