ವೀರಾಜಪೇಟೆ, ಆ. 12: ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡ ಘಟನೆ ನಡೆದಿದೆ. ಕಾಕೋಟುಪರಂಬುವಿನ ಮುಖ್ಯ ರಸ್ತೆಯ ಬಲದ ಬದಿಯಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದುಕೊಂಡು ಹೋಗುತ್ತಿದ್ದ ಮಂಡೇಪಂಡ ಮುತ್ತಪ್ಪ ಅಲಿಯಾಸ್ ರವಿ (66) ಎಂಬವರಿಗೆ ಸಲ್ಲಾರಿಯೋ ಕಾರು ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಇವರ ಜೊತೆಯಲ್ಲಿದ್ದ ಮಂಡೇಟಿರ ಮುತ್ತಪ್ಪ ಅಲಿಯಾಸ್ ರಘು (63)ಅವರಿಗೆ ಎರಡು ಕಾಲು ಹಾಗೂ ಬೆನ್ನಿನ ಮೂಳೆ ಮುರಿದಿದ್ದು ಗಂಭೀರ ಸ್ವರೂಪದ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ.

ಇಂದು ಅಪರಾಹ್ನ 12-30ರ ಸಮಯದಲ್ಲಿ ನಾಟೋಳಂಡ ಬಿದ್ದಪ್ಪ ಅವರು ಕೆಲಸದ ನಿಮಿತ್ತ ತಮ್ಮ ಸೆಲ್ಲಾರಿಯೋ (ಕೆ.ಎ.12 ಎಂ.ಎ.1258) ಕಾರಿನಲ್ಲಿ ಕಾಕೋಟು ಪರಂಬುವಿನ ವಿಜಯಾ ಬ್ಯಾಂಕ್‍ಗೆ ತೆರಳುತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರು ನಿಯಂತ್ರಣ ತಪ್ಪಿ ಇಬ್ಬರು ಪಾದಚಾರಿಗಳಿಗೆ ಡಿಕ್ಕಿಯಾದ ನಂತರ ಮುಂದಕ್ಕೆ ಹೋಗಿ ಮಗುಚಿಕೊಂಡಿದೆ.

ವೀರಾಜಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಅಪಘಾತದ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ಗ್ರಾಮಾಂತರ ಪೊಲೀಸರು ಕಾರಿನ ಚಾಲಕ ಬಿದ್ದಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.