ಕೂಡಿಗೆ, ಆ. 12: ಕಳೆದ ಬಾರಿ ಪ್ರಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ಬಹಳಷ್ಟು ಮಂದಿಗೆ ಪರಿಹಾರ ಬಂದಿಲ್ಲ. ಈ ಬಾರಿಯೂ ಅದೇ ರೀತಿ ಮನೆಗಳು ಜಲಾವೃತವಾಗಿ ಭಾರೀ ನಷ್ಟ ಸಂಭವಿಸಿದ್ದು, ಈ ಬಾರಿಯಾದರೂ ಪರಿಹಾರವನ್ನು ಸಮರ್ಪಕವಾಗಿ ನೀಡಬೇಕೆಂಬದು ಸಂತ್ರಸ್ತರ ಅಳಲು.
ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದ ನಷ್ಟಕೊಳಗಾಗಿದ್ದ 85 ಮನೆಗಳಿಗೆ ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದ ಪರಿಹಾರ ನಿಧಿಯಲ್ಲಿ ಕಂದಾಯ ಇಲಾಖೆಯ ವತಿಯಿಂದ ತಲಾ 3000 ರೂಗಳನ್ನು ವಿತರಿಸಲಾಗಿತ್ತು. ತದನಂತರ ಸಮೀಕ್ಷೆ ನಡೆಸಿದ್ದ ಅಧಿಕಾರಿಗಳು, ಇದುವರೆಗೂ ಯಾವದೇ ಪರಿಹಾರ ನೀಡಿಲ್ಲ, ನಷ್ಟಕ್ಕೊಳಗಾದ ಸಂತ್ರಸ್ತರು ಅಂದಿನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ, ಈವರೆಗೂ ಪರಿಹಾರವೇ ಬಂದಿಲ್ಲ.
ಕಳೆದ ಬಾರಿ ಸಂತ್ರಸ್ತರಾಗಿದ್ದ ಸ್ಥಳೀಯರ ಮನೆಗಳು ಈ ಬಾರಿಯು ಜಲಾವೃತಗೊಂಡು ನಷ್ಟವಾಗಿದ್ದು, ಗ್ರಾಮ ಪಂಚಾಯಿತಿಯವರು ನಷ್ಟಕ್ಕೊಳಗಾಗಿರುವವರ ಹೆಸರನ್ನು ನೋಂದಾಯಿಸಿಕೊಂಡು ಸಮೀಕ್ಷೆ ನಡೆಸಿದ್ದಾರೆ. ಅರ್ಜಿಯನ್ನು ಸ್ವೀಕರಿಸಿರುವ ಅಧಿಕಾರಿಗಳು ಈ ಭಾರಿಯಾದರೂ ನಷ್ಟಕ್ಕೊಳಗಾಗಿರುವವರಿಗೆ ಸೂಕ್ತ ಸಮಯದಲ್ಲಿ ಪರಿಹಾರ ಒದಗಿಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ. -ನಾಗರಾಜಶೆಟ್ಟಿ