ಮಡಿಕೇರಿ, ಆ. 12: ವೀರಾಜಪೇಟೆಯ ಕಾವೇರಿ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ಉದ್ಘಾಟನಾ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿದ್ದ ಪ್ರೊ. ಇಟ್ಟೀರ ಕೆ. ಬಿದ್ದಪ್ಪ, ನಿವೃತ್ತ ಪ್ರಾಂಶುಪಾಲರು ಹಾಗೂ ನಿರ್ದೇಶಕರು, ಕಾವೇರಿ ಎಜುಕೇಶನ್ ಸೊಸೈಟಿ ಗೋಣಿಕೊಪ್ಪಲು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಎನ್.ಎಸ್.ಎಸ್. ಸೇರುವದರಿಂದ ಮಾನಸಿಕ ದೃಢತೆ ಹಾಗೂ ಧೈರ್ಯ ಮೈಗೂಡುವದು. ವಿದ್ಯಾರ್ಥಿಗಳು ಜೀವನದಲ್ಲಿ ಪೋಷಕರ ಋಣ ಎಷ್ಟಿದೆಯೋ ಅಷ್ಟೇ ಸಮಾಜದ ಋಣವೂ ಇರುವದರಿಂದ ಹೆಚ್ಚಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಮತ್ತೋರ್ವ ಮುಖ್ಯ ಅತಿಥಿ ವಿದ್ಯಾಸಂಸ್ಥೆ ನಿರ್ದೇಶಕ ಗೋಣಿಕೊಪ್ಪಲಿನ ಸಿ.ಡಿ. ಮಾದಪ್ಪ ಅವರು 2018-19ನೇ ಸಾಲಿನ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ ಭಾಗವಹಿಸಿದ್ದರು. ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಲಹಾ ಸಮಿತಿಯ ಸಂಚಾಲಕ ಟಿ.ಎನ್. ಕರುಣ್‍ಕುಮಾರ್, ಯೋಜನಾಧಿಕಾರಿ ಕೆ. ದೀಪಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ಣಿಮಾ ಪ್ರಾರ್ಥಿಸಿದರು. ಮುತ್ತಪ್ಪ ವಂದಿಸಿದರು. ಕಾಲೇಜಿನ ಉಪನ್ಯಾಸಕರು ಹಾಗೂ ಎನ್.ಎಸ್.ಎಸ್. ವಿದ್ಯಾರ್ಥಿಗಳು ಭಾಗವಹಿಸಿದ್ದರು.