ವೀರಾಜಪೇಟೆ, ಆ. 13: ವೀರಾಜಪೇಟೆಯ ಅರಣ್ಯ ವಲಯದ ಕೊಮ್ಮೆತೋಡು ಹಾತೂರು ಸಂಪರ್ಕ ರಸ್ತೆಯ ಚೋಕಂಡಹಳ್ಳಿಯಲ್ಲಿ ತಾ. 6ರಂದು ಮಿನಿ ಲಾರಿಯಲ್ಲಿ ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಸುಮಾರು 8 ಲಕ್ಷ ಮೌಲ್ಯದ ಲಾರಿ ಹಾಗೂ ಸುಮಾರು ನಾಲ್ಕು ಲಕ್ಷ ಮೌಲ್ಯದ ಮರ ಸೇರಿದಂದೆ ಅಂದಾಜು 12 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳು ಪರಾರಿಯಾಗಿದ್ದರು. ನಂತರ ಆರೋಪಿಗಳಿಗಾಗಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಇದೀಗ ಕೇರಳದ ಇರಿಟ್ಟಿ ತಾಲೂಕಿನ ರಜನೀಶ್ ಮತ್ತು ಲಿತೇಶ್ ಇವರನ್ನು ಬಂಧಿಸಿದ್ದು ವೀರಾಜಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಶನಿ ಇವರ ಮಾರ್ಗದರ್ಶನದಲ್ಲಿ, ಅರಣ್ಯ ವಲಯಾಧಿಕಾರಿ ಕಂಬೆಯಂಡ ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ, ಅರಣ್ಯ ರಕ್ಷಕರಾದ ಮಾಲತೇಶ್, ಬಡಿಗೇರಿ ಹಾಗೂ ಸಿಬ್ಬಂದಿಗಳಾದ ಶಿವರಾಜು, ಮಹೇಶ್ ಮತ್ತು ವಾಹನ ಚಾಲಕ ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.