ಮಡಿಕೇರಿ, ಆ. 12: ಬಕ್ರೀದ್ ದಿನವಾದರೂ ಏನೂ ಹಬ್ಬವೈಭೋಗ ವಿಲ್ಲದೆ ಆಚರಿಸದೆ ಜಾಸೀರ್ ತಮ್ಮ ಹೊಟೇಲಿನಲ್ಲಿ ಏನೋ ಹುಡುಕಾಡು ತ್ತಿದ್ದರು. ನಂತರ ಒಂದು ಚಮಚವನ್ನು ಹುಡುಕಿ ತೆಗೆದು, ‘22 ಚಮಚಗಳಲ್ಲಿ ಇದು ಒಂದು ಚಮಚ ದೊರೆಕಿದೆ’ ಎಂದು ನಕ್ಕರು. ನಂತರ ನಗು ಮಾಯೆಯಾಗಿ, ‘ಇದೇ ನಮ್ಮ ಬಕ್ರೀದ್ ಆಚರಣೆ,’ ಎಂದು ದುಃಖದ ಮಾತುಗಳನ್ನಾಡಿದರು.
ನಾಲ್ಕು ದಿನಗಳ ಕಾಲ ಪ್ರವಾಹ ದಲ್ಲಿ ಮುಳುಗಿಹೋಗಿದ್ದ ಬೇತ್ರಿ ಗ್ರಾಮ ಇಂದು ತಲೆಎತ್ತುತ್ತಿದ್ದಂತೆ, ಗ್ರಾಮದ ಜನರು ತಮ್ಮ ಸಂಬಂಧಿಕರ ಮನೆಗ ಳಿಂದ ತಮ್ಮ ಮನೆಗಳತ್ತ ತಿರುಗಿ ಬಂದರು. ಆದರೆ, ಸಂತಸದ ಬದಲು ಚಿಂತೆ ಗ್ರಾಮವನ್ನು ಆವರಿಸಿತ್ತು. ‘ನಾನು ಎಂದಿಗೂ ಬೇತ್ರಿಯ ನೀರು 13 ಅಡಿ ಎತ್ತರಕ್ಕೇರಿ ದ್ದನ್ನು ನೋಡಿ ರಲಿಲ್ಲ. ಎಷ್ಟೋ ದಶಕಗಳ ಹಿಂದೆಯೂ ಕಾವೇರಿ ಈ ಎತ್ತರಕ್ಕೆ ಏರಿರಲಿಲ್ಲ’ ಎಂದು 65 ವರ್ಷದ ಹ್ಯಾರಿಸ್ ನೆನಪನ್ನು ಹಂಚಿಕೊಳ್ಳು ತ್ತಾರೆ. ಕಳೆದ ವರ್ಷ ಬೇತ್ರಿಯ ನೀರು ಮನೆ ಹಾಗೂ ಅಂಗಡಿ ಮಳಿಗೆಗಳಿಗೆ ಸ್ವಲ್ಪ ಪ್ರಮಾಣ ದಲ್ಲಿ ನುಗ್ಗಿದ್ದರಿಂದ ಈ ವರ್ಷ ಅವರು ತಮ್ಮ ಮನೆಯನ್ನು ಮಹಡಿಗೆ ವಿಸ್ತರಿಸಿದ್ದರು. ‘ಬೇತ್ರಿ ನದಿ ಏರುತ್ತಿದ್ದಂತೆಯೇ ನಮ್ಮ ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸಿದೆವು. ನಂತರ, ಪ್ರವಾಹದ ನೀರು 2ನೇ ಮಹಡಿಗೆ ತಲಪುವದಿಲ್ಲ ಎಂಬ ಧೈರ್ಯದಿಂದ ನಾವು ಮಹಡಿಯಲ್ಲಿ ವಾಸವಿದ್ದೆವು. ಆದರೆ, ನೀರು 13 ಅಡಿ ಏರಿತು. ಇಡೀ ಮನೆಯೇ ಮುಳುಗಡೆಯಾಗಲು ಆರಂಭಿಸಿದಾಗ ‘ಕಂಟ್ರೋಲ್ ರೂಂ’ಗೆ ಕರೆಮಾಡಿದೆವು. ಜಿಲ್ಲಾಧಿಕಾರಿಗಳು ತಕ್ಷಣ ಸ್ಪಂದಿಸಿ ರಕ್ಷಣಾ ಪಡೆಯನ್ನು ಕರೆಸಿ ನಮ್ಮನ್ನು ರಕ್ಷಿಸಿದರು’ ಎಂದು ಅವರು ವಿವರಿಸು ತ್ತಾರೆ. ಸೋಮವಾರದಂದು ಗ್ರಾಮಸ್ಥ ರೆಲ್ಲರು ಮನೆಗೆ ಹಿಂತಿರುಗಿದರಾದರೂ, ಅವರ ಮನೆ ಶಾಂತಿಯ ನೆಲೆಯಾಗಿಲ್ಲ. ಗ್ರಾಮದ ವರ್ಗೀಸ್ ಹಾಗೂ ಬೇಬಿ ಕುಟುಂಬ ತಮ್ಮ ಮನೆಯಲ್ಲಿರುವ ಹಾಸಿಗೆ ಗಳನ್ನೆಲ್ಲಾ ಹೊರಹಾಕುತ್ತಾ, ಕಪಾಟುಗಳಲ್ಲಿ ಏನ್ನೆಲ್ಲ ಉಳಿದಿವೆ ಎಂದು ಪರೀಕ್ಷಿಸುತ್ತಿದ್ದರು. ‘ನಾವು ಜೀವಂತವಾಗಿದ್ದೇವೆ ಎಂಬ ಸಂತಸ ನಮ್ಮೊಂದಿಗಿದೆ,’ ಎಂದು ಬೇಬಿ ಹಸನ್ಮುಖಿಯಾಗಿ ನುಡಿಯುತ್ತಾರೆ.
ಇನ್ನು ಬೊಳ್ಳೂಮಾಡು ಗ್ರಾಮದಲ್ಲಿ ಎಕರೆಗಟ್ಟಲೆ ಕಾಫಿ ಗಿಡಗಳು ಕೆಸರುಮಯವಾಗಿದ್ದರೆ, ಹಲವಾರು ಮನೆಗಳು ನೆಲಸಮವಾಗಿವೆ. ಹಲವಾರು ತೋಟಕಾರ್ಮಿಕರು ತಮ್ಮ ನೆಲೆಗಳನ್ನು ಕಳೆದುಕೊಂಡಿದ್ದರೂ ಬದುಕುವ ಛಲವನ್ನು ಕಳೆದು ಕೊಂಡಿಲ್ಲ. ‘ಪ್ರವಾಹದ ಸಂದರ್ಭ ನಾವು ನಮ್ಮ ತೋಟ ಮಾಲಿಕರ ಮನೆಯಲ್ಲಿ ವಾಸವಾಗಿದ್ದೆವು. ಇಂದು ಮನೆಯತ್ತ ಬಂದು ನೋಡಿದಾಗ ಮನೆ ಬಿದ್ದಿದೆ’ ಎಂದು ವಿವರಿಸುವ ಮಂಜು, ಮುಂದೇನು ಎಂದು ಪ್ರಶ್ನಿಸಿದಾಗ, ‘ನಮ್ಮ ಮನೆಯನ್ನು ನಾವೇ ಕಟ್ಟಿ ಇಲ್ಲೇ ಜೀವನ ಸಾಗಿಸುತ್ತೇವೆ’ ಎನ್ನುತ್ತಾರೆ.
ಕೊಟ್ಟಮುಡಿಯ ಗ್ರಾಮದ ಲ್ಲಂತೂ ಬಿಕೋ ಎನ್ನುವ ವಾತಾವರಣ. ಗ್ರಾಮದಲ್ಲಿ ಪ್ರತಿವರ್ಷ ಕಾಣುವ ಬಕ್ರೀದ್ನ ಸಂಭ್ರಮ ಈ ವರ್ಷ ಕಾಣದಂತಾಗಿತ್ತು. ಬದಲಿಗೆ ಒಂದು ಮೂಲೆಯಲ್ಲಿ ಕುಳಿತು ಮನೆಯ ಯಜಮಾನ ಸ್ವಲ್ಪ ಅನ್ನ ಸೇವಿಸುತ್ತಿದ್ದರೆ ಒಡತಿ ಒತ್ತರೆ ಕಾರ್ಯ ದಲ್ಲಿ ತೊಡಗಿದ್ದಳು. ‘ಸುಮಾರು 80ಕ್ಕೂ ಹೆಚ್ಚು ಮನೆ ಪ್ರವಾಹದಲ್ಲಿ ಸಿಲುಕಿತ್ತು. ನಾವು ನನ್ನ ತಂಗಿಯ ಮನೆಯಲ್ಲಿ ವಾಸಿಸುತ್ತಿದ್ದೆವು. ಈಗ ಅಲ್ಲಿಂದ ಊಟ ತಂದು ನಮ್ಮ ಮನೆಯಲ್ಲಿ ಉಳಿದ ವಸ್ತುಗಳನ್ನು ಸರಿಪಡಿಸುತ್ತಿದ್ದೇವೆ’ ಎಂದರು ಕೊಟ್ಟಮುಡಿಯ ಸೌರ.
-ಪ್ರಜ್ಞಾ ಜಿ.ಆರ್.