ಕಣಿವೆ, ಆ. 12: ಕಳೆದ ನಾಲ್ಕು ದಿನಗಳಿಂದ ಉಕ್ಕಿ ಹರಿದ ಕಾವೇರಿ ಪ್ರವಾಹ ಸೋಮವಾರ ಒಂದಷ್ಟು ಪ್ರಮಾಣದಲ್ಲಿ ಇಳಿಮುಖವಾಗಿದೆ.

ಆದರೆ, ಕಾವೇರಿ ನದಿ ದಂಡೆಯ ಉದ್ದಕ್ಕೂ ಕುಶಾಲನಗರ ಹೋಬಳಿಯ ನೂರಾರು ರೈತರು ಕೈಗೊಂಡಿದ್ದ ಜೋಳ, ಭತ್ತ ಮತ್ತು ಶುಂಠಿ ಫಸಲು ನೀರು ತುಂಬಿ ಹಾಳಾಗಿದೆ.

ಕೈಗೆ ಬಂದಿದ್ದ ಜೋಳದ ಫಸಲನ್ನು ಕಟಾವು ಮಾಡಬೇಕೆನ್ನುವ ಹೊತ್ತಿಗೆ ಒಂದೇ ಸಮನೆ ಸುರಿದ ಮಳೆಯಿಂದಾಗಿ ಏರಿದ ಕಾವೇರಿ ಪ್ರವಾಹ ಎಲ್ಲವನ್ನು ಇಲ್ಲವಾಗಿಸಿದೆ. ಇದರಿಂದಾಗಿ ಅನೇಕ ರೈತರ ಹಣ, ನೆಮ್ಮದಿ ಎಲ್ಲವೂ ಕೊಚ್ಚಿಕೊಂಡು ಹೋಗಿದೆ.

ಸೋಮವಾರ ಕಾವೇರಿ ದಂಡೆ ಯಲ್ಲಿನ ಪ್ರವಾಹ ತಗ್ಗಿದ ಸಂದರ್ಭ ದಲ್ಲಿ ತಾವು ಬೆಳೆದಿದ್ದ ಬೆಳೆ, ನೀರು ಪಾಲಾಗಿದ್ದನ್ನು ಕಂಡ ಅನೇಕ ರೈತರ ಕಣ್ಣಾಲಿಗಳು ತುಂಬಿ ಬಂದಿದ್ದವು.

ಒಂದು ಕ್ವಿಂಟಾಲ್ ಜೋಳಕ್ಕೆ ಈಗ ಮಾರುಕಟ್ಟೆ ಯಲ್ಲಿ 2300 ರಿಂದ 2500 ರೂ. ಇದೆ. ಒಂದು ಎಕರೆ ಭೂಮಿಯಲ್ಲಿ ಜೋಳದ ಬೆಳೆ ಬೆಳೆದರೆ ಕನಿಷ್ಟ 30 ರಿಂದ 40 ಚೀಲ ಜೋಳದ ಫಸಲು ಬರುತ್ತಿತ್ತು. ಕನಿಷ್ಟವೆಂದರೂ ಎಕರೆಯೊಂದರಲ್ಲಿ 90 ಸಾವಿರ ರೂ. ಗಳಿಂದ 1 ಲಕ್ಷ ರೂ. ಹಣ ಸಿಗುತ್ತಿತ್ತು.

ಆದರೆ ಇದೀಗ ಪ್ರವಾಹದಿಂದಾಗಿ ನಷ್ಟ ವಾಗಿರುವ ಬೆಳೆಗೆ ಸರ್ಕಾರ ಆ ಪ್ರಮಾಣದ ಬೆಳೆ ಪರಿಹಾರ ನೀಡುವದು ಮರೀಚಿಕೆಯೇ ಸರಿ.

ಇನ್ನು, ಇತ್ತೀಚಿನ ದಿನಗಳಲ್ಲಿ ರೈತರ ಪ್ರಮುಖ ವಾಣಿಜ್ಯ ಬೆಳೆ ಆಗಿರುವ ಶುಂಠಿ ಹೇಳ ಹೆಸರಿಲ್ಲದಂತೆ ನೀರಿನಲ್ಲಿ ನಾಶವಾಗಿದೆ.

ಮಾರುಕಟ್ಟೆಯಲ್ಲಿ ಪ್ರಸಕ್ತ 60 ಕೆ.ಜಿ. ತೂಕದ ಶುಂಠಿ ಫಸಲಿಗೆ 3500 ರೂ. ದರ ಇದೆ. ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಅನೇಕ ರೈತರು ಶುಂಠಿ ಬೆಳೆ ಬೆಳೆದಿದ್ದರು.

ಆದರೆ ಯಾರಿಗೂ ಊಹಿಸ ಲಾಗದ ಪ್ರವಾಹ ಬಂದು ಶುಂಠಿ ಫಸಲನ್ನು ಆವರಿಸಿದ ಪರಿಣಾಮ ಆ ಬೆಳೆಯೂ ಕೂಡ ನೀರಿನಲ್ಲಿ ಕರಗಿ ಹೋಗಿದೆ. ಇನ್ನು ನಾಟಿ ಮಾಡಿದ್ದ ಗದ್ದೆಗಳು ಜಲಮಯವಾಗಿವೆ. ಭತ್ತದ ನಾಟಿಗೆ ಸಿದ್ಧಗೊಳಿಸಿದ್ದ ಭತ್ತದ ಸಸಿ ಮಡಿಗಳು ವಾರಪೂರ್ತಿ ನಿಲುಗಡೆ ಗೊಂಡ ನೀರಿಗೆ ಆಹುತಿಯಾಗಿವೆ.

ಜಿಲ್ಲಾಡಳಿತ ಮನೆಗಳನ್ನು ಕಳೆದು ಕೊಂಡವರಿಗೆ ಪುನರ್ವಸತಿ ಅಥವಾ ಪರಿಹಾರ ಕೇಂದ್ರ ಎಂದು ಕಾಳಜಿ ತೋರುವದರ ಜೊತೆಗೆ ಮನೆ ಕಳೆದು ಕೊಂಡ ರೈತನ ಬೆಳೆ ಹಾನಿ ಪರಿಹಾರಕ್ಕೂ ಸೂಕ್ತ ಕ್ರಮ ವಹಿಸಬೇಕು ಎಂಬದು ರೈತರ ಒಕ್ಕೊರಲ ಒತ್ತಾಯ.

ಈಗಾಗಲೇ ಜಲಾವೃತಗೊಂಡು ಹಾನಿಯಾಗಿರುವ ಬೆಳೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ಒದಗಿಸಲು ಮುಂದಾಗ ಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕಳೆದ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ಬಾಮಿ ಅವರು ಋಣ ಮುಕ್ತ ಕಾಯಿದೆ ಜಾರಿಗೆ ತಂದ ಬಳಿಕ ಗ್ರಾಮೀಣ ಪ್ರದೇಶಗಳಲ್ಲಿ ಕೈ ಸಾಲ ಕೊಡುವವರು ಹಿಂದೇಟು ಹಾಕುತ್ತಿದ್ದು, ಬ್ಯಾಂಕ್‍ಗಳು ಕೂಡ ಸಕಾಲದಲ್ಲಿ ಸಾಲ ನೀಡುವದಿಲ್ಲ.

ಈಗಾಗಲೇ ಬೆಳೆ ಮಾಡಲೆಂದೇ ಪತ್ನಿ ಹಾಗೂ ಮಕ್ಕಳ ಒಡವೆಗಳನ್ನು ಗಿರವಿ ಇಟ್ಟು ಸಾಲ ತಂದಿದ್ದು, ಅದನ್ನು ಹೇಗೆ ತೀರಿಸೋದು ಎಂಬದೇ ತಿಳಿಯುತ್ತಿಲ್ಲ ಎಂದು ಗ್ರಾಮದ ರೈತ ಜವರಯ್ಯ, ಕಣಿವೆಯ ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ.