ಕೂಡಿಗೆ, ಆ. 13: ಪ್ರಯಾಣಿಕನೊಬ್ಬ ಕುಡಿದು ಗಲಾಟೆ ಮಾಡಿದನೆಂದು ಸಂಚಾರಿ ನಿಯಂತ್ರಕ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಹೆಬ್ಬಾಲೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪ್ರಯಾಣಿಕನೋರ್ವ ಸಂಚಾರಿ ನಿಯಂತ್ರಕರ ಕೊಠಡಿಯ ಹತ್ತಿರ ಅವಾಚ್ಯ ಶಬ್ಧಗಳಿಂದ ನಿಂದಿಸಿದನೆಂದು ಹೆಬ್ಬಾಲೆ ಬಸ್ಸು ನಿಲ್ದಾಣದ ಸಂಚಾರಿ ನಿಯಂತ್ರಕ ಆತನ ಮೇಲೆ ಹಲ್ಲೆ ನಡೆಸಿ, ರಕ್ತ ಸುರಿಯುತ್ತಿದ್ದ ಪ್ರಯಾಣಿಕನನ್ನು ಅದೇ ಕೊಠಡಿಯೊಳಗೆ ಬೀಗ ಹಾಕಿ, ಪೊಲೀಸರಿಗೆ ದೂರು ನೀಡಲು ತೆರಳಿದ ಸಂದರ್ಭ, ವಿಷಯ ತಿಳಿದ ಹೆಬ್ಬಾಲೆಯ ನೂರಾರು ಗ್ರಾಮಸ್ಥರು ಸಂಚಾರಿ ನಿಯಂತ್ರಕರನ್ನು ತರಾಟೆಗೆ ತೆಗೆದುಕೊಂಡು ಕೈಕೈ ಮಿಲಾಯಿಸುವ ಹಂತಕ್ಕೆ ತಲಪಿದ ಪ್ರಸಂಗ ಎದುರಾಯಿತು.
ವಿಷಯ ತಿಳಿದ ತಕ್ಷಣ ಕುಶಾಲನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ, ಸಾರ್ವಜನಿಕರನ್ನು ಸಮಾಧಾನಗೊಳಿಸಿ ರಾಜ್ಯ ಸಾರಿಗೆ ಸಂಸ್ಥೆಯ ಸಂಚಾರಿ ನಿಯಂತ್ರಕ ಉಮೇಶ್ ಅವರನ್ನು ಠಾಣೆಗೆ ಕರೆದೊಯ್ದರು. ನಂತರ ಪೊಲೀಸರು ಕೊಠಡಿಯ ಬೀಗವನ್ನು ಒಡೆದು ರಕ್ತ ಸುರಿಯುತ್ತಿದ್ದ ಸಣ್ಣಯ್ಯ ಶೆಟ್ಟಿ ಎಂಬವರನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಿದರು. ಆಕ್ರೋಶದಲ್ಲಿದ್ದ ಜನರನ್ನು ಪೊಲೀಸರು ಸಮಾಧಾನ ಗೊಳಿಸುವಲ್ಲಿ ಯಶಸ್ವಿಯಾದರು.
ಬಸ್ ನಿಲ್ದಾಣದ ಕೊಠಡಿಯಲ್ಲಿ ಸಂಚಾರಿ ನಿಯಂತ್ರಕ ಉಮೇಶ್ ಅವರು ಪ್ರಯಾಣಿಕ; ಹೆಬ್ಬಾಲೆಯ ನಿವಾಸಿ ಸಣ್ಣಯ್ಯ ಶೆಟ್ಟಿ ಅವರಿಗೆ ರಾಡಿನಿಂದ ಹೊಡೆದಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಅದಕ್ಕೆ ಪುಷ್ಠಿ ನೀಡುವಂತೆ ಸಂಚಾರಿ ನಿಯಂತ್ರಕರ ಕೊಠಡಿಯಲ್ಲಿ ರಕ್ತವು ಹರಡಿದೆ.
ಈ ಬಗ್ಗೆ ಸಣ್ಣಯ್ಯಶೆಟ್ಟಿ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಣ್ಣಯ್ಯ ಶೆಟ್ಟಿ ತಲೆಗೆ ಪೆಟ್ಟಾಗಿದ್ದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಭೇಟಿ ನೀಡಿ ಗಾಯಾಳು ಸಣ್ಣಯ್ಯ ಶೆಟ್ಟಿ ಅವರನ್ನು ವೀಕ್ಷಿಸಿ, ಜನರಿಂದ ಮಾಹಿತಿ ಪಡೆದು, ಹೆಬ್ಬಾಲೆಯ ಬಸ್ ನಿಲ್ದಾಣಕ್ಕೆ ಧಾವಿಸಿ ಘಟನೆ ಸ್ಥಳ ಪರಿಶೀಲಿಸಿ, ಮೊಕದ್ದಮೆ ದಾಖಲಿಸಿ ಕೊಂಡು, ಮುಂದಿನ ಕ್ರಮಕೈಗೊಂಡಿದ್ದಾರೆ.
ಇತ್ತಸಂಚಾರಿ ನಿಯಂತ್ರಕ ಉಮೇಶ್ ಅವರು ಸಹ, ಸಣ್ಣಯ್ಯ ಶೆಟ್ಟಿ ಮದ್ಯ ಸೇವಿಸಿ ಅವಾಚ್ಯ ಪದಗಳಿಂದ ನಿಂದಿಸಿ, ಕಚೇರಿ ಯೊಳಗೆ ಬಂದು ಕಿಟಕಿಯ ಕಬ್ಬಿಣದ ರಾಡಿಗೆ ಅವರೇ ತಲೆಯನ್ನು ಚಚ್ಚಿಕೊಂಡಿದ್ದಾರೆ ಎಂದು ಪ್ರತಿ ದೂರು ನೀಡಿದ್ದಾರೆ.