ವೀರಾಜಪೇಟೆ, ಆ. 13: ಜಿಲ್ಲೆಯಲ್ಲಿ ಘಟಿಸಿದ ಜಲಪ್ರಳಯದಲ್ಲಿ ತುತ್ತಾದ ಸಂತ್ರಸ್ತ ಕುಟುಂಬಗಳಿಗೆ ವಿತರಿಸಲು ಅಹಾರ ಕಿಟ್ ಸಿದ್ದಗೊಳಿ ಸುವದು ಮತ್ತು ವಿತರಣೆಯಲ್ಲಿ ಇಲಾಖೆಯೊಂದಿಗೆ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿವೆ.

ಕೊಡಗು ಜಿಲ್ಲೆ ಅಲ್ಲದೆ ರಾಜ್ಯದ ವಿವಿಧೆಡೆಗಳಲ್ಲಿ ಮಳೆಯ ಭೀಕರತೆ ಯಿಂದ ಜಳಪ್ರಳಯ ಸಂಭವಿಸಿದೆ. ಕೊಡಗಿನಲ್ಲಿ ಪ್ರಾಣ ಹಾನಿ ಸೇರಿದಂತೆ ಅಸ್ತಿಪಾಸ್ತಿ ಹಾನಿ ಯಾಗಿದ್ದು, ಜಿಲ್ಲೆಯ ವಿವಿಧೆಡೆಗಳಲ್ಲಿ ಸ್ಥಾಪಿತವಾದ ಪರಿಹಾರ ಕೇಂದ್ರಗಳಲ್ಲಿ ರುವ ಸಂತ್ರಸ್ತ ಕುಟುಂಬಗಳಿಗೆ ವಿತರಿಸಲು ಆಹಾರ ಕಿಟ್ ಸಜ್ಜಾಗಿದ್ದು ವೀರಾಜಪೇಟೆಯ ಮೊಗರಗಲ್ಲಿಯಲ್ಲಿರುವ ಕಾವೇರಿ ಕಲ್ಯಾಣ ಮಂಟಪದಲ್ಲಿ ಆಹಾರ ಕಿಟ್ ಸಿದ್ಧಗೊಳ್ಳುತ್ತಿದೆ. ಸಂತ್ರಸ್ತರ ಕಿಟ್‍ನಲ್ಲಿ ಅಕ್ಕಿ 10 ಕೆ.ಜಿ., ಬೇಳೆ 1 ಕೆ.ಜಿ, ಸಕ್ಕರೆ 1.ಕೆ.ಜಿ, ಉಪ್ಪು 1 ಕೆ.ಜಿ.ಪಾ. ಎಣ್ಣೆ 1 ಲೀ, ಮತ್ತು ಸೀಮೆಣ್ಣೆ ಅಡಕವಾಗಿದೆ. ತಲಾ ಒಂದು ಕುಟುಂಬಕ್ಕೆ 2 ಕಿಟ್‍ನಂತೆ ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 28 ಪರಿಹಾರ ಕೇಂದ್ರಗಳಿದ್ದು, ಇಂದಿನವರೆಗ 4000 ಕಿಟ್ ಸಿದ್ಧಗೊಂಡು 2300 ಕಿಟ್ ವಿತರಿಸಲಾಗಿದೆ. ಇನ್ನುಳಿದ ಕಿಟ್‍ಗಳನ್ನು ಶೀಘ್ರದಲ್ಲಿ ವಿತರಿಸಲಾಗುತ್ತದೆ ಎಂದು ಅಹಾರ ಇಲಾಖೆಯ ಉಪ ನಿರ್ದೇಶಕ ಲಿಂಗರಾಜು ಮಾಹಿತಿ ನೀಡಿದರು.

ಆಹಾರ ಕಿಟ್ ಸಿದ್ಧಗೊಳಿಸುವಲ್ಲಿ ಆಹಾರ ಇಲಾಖೆ ಸಹಾಯಕ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಮತ್ತು ಇಲಾಖೆಯ ಸಿಬ್ಬಂದಿಗಳು. ಸೇವಾ ಭಾರತಿ ಸದಸ್ಯರು, ಮಡಿಕೇರಿಯ ಎಫ್.ಎಂ.ಸಿ ಕಾಲೇಜು ಎನ್.ಸಿ.ಸಿ ವಿಭಾಗ ಮೇಜರ್ ರಾಘವ ಅವರ ನೇತೃತ್ವದಲ್ಲಿ ಒಟ್ಟು 28 ಕೆಡೆಟ್‍ಗಳು, ವೀರಾಜಪೇಟೆ ಕಾವೇರಿ ಕಾಲೇಜು ಎನ್.ಸಿ.ಸಿ ವಿಭಾಗ ಬೀನಾ ಅವರ ನೇತೃತ್ವದಲ್ಲಿ 23 ಕೆಡೆಟ್‍ಗಳು, ತಾಲೂಕು ಎ.ಬಿ.ವಿ.ಪಿ 22 ಸದಸ್ಯರು, ಅಲ್ಲದೇ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಸೇರಿದಂತೆ 100ಕ್ಕೂ ಅಧಿಕ ಮಂದಿ ಸಹಕಾರ ನೀಡುತ್ತಿದ್ದಾರೆ.

-ಕೆ.ಕೆ.ಎಸ್. ವೀರಾಜಪೇಟೆ