ಮಡಿಕೇರಿ, ಆ. 12: ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಪ್ರವಾಹ ಪರಿಸ್ಥಿತಿ ತಲೆದೋರಿ ಜನತೆ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ಅನ್ನು ಸಾಂಕೇತಿಕವಾಗಿ ಆಚರಿಸ ಲಾಗಿದೆ. ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಈದುಲ್ ಅಝ್ಹಾ ಬಕ್ರೀದ್ ಹಬ್ಬವನ್ನು ವರ್ಷಂಪ್ರತಿ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಪ್ರಕೃತಿ ಮುನಿದಿರು ವದರಿಂದ ಸಾಂಕೇತಿಕವಾಗಿ ಸರಳವಾಗಿ ಆಚರಿಸಲಾಗಿದೆ.ಇಲ್ಲಿನ ಮಹದೇವಪೇಟೆ ಯಲ್ಲಿರುವ ಜಾಮೀಯ ಮಸೀದಿಯಲ್ಲಿ ಸೇರಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಅಲ್ಲಿ ಧರ್ಮಗುರು ಮೌಲಾನ ತಫ್ವೀರ್ ಸಹಾಜ್ ನೇತೃತ್ವದಲ್ಲಿ ನಮಾಜ್ ನೆರವೇರಿಸಲಾಯಿತು. ಬಳಿಕ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೆ ಒಳ ಗಾಗಿರುವ ಜನತೆಯ ಕಷ್ಟ ಪರಿಹರಿಸು ವಂತೆ ಪ್ರಾರ್ಥನೆ ಸಲ್ಲಿಸಲಾಯಿತು.
ಮಡಿಕೇರಿಯ ಅಹ್ಮದಿಯಾ ಮುಸ್ಲಿಮ್ ಜಮಾಅತ್ ಬೈತುಲ್ ಹುದಾ ಮಸೀದಿಯಲ್ಲಿ ಈದುಲ್ ಅಝ್ಹಾ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಸೀದಿಯ ಧರ್ಮಗುರು ಹಾಫಿಝ್ ರಫೀಕ್ ಉಜ್ಜಮಾ ಅವರ ನೇತೃತ್ವದಲ್ಲಿ ಮುಸ್ಲಿಮ್ ಬಾಂಧವರು ವಿಶೇಷ ನಮಾಝ್ ನಿರ್ವಹಿಸಿದರು.ಧಾರ್ಮಿಕ ಪ್ರವಚನದ ನಂತರ ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ತೊಂದರೆಗೆ ಒಳಗಾದ ಜನರ ಕಷ್ಟ ಪರಿಹರಿಸುವಂತೆ ಹಾಗೂ ಲೋಕದ ಸರ್ವಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.ಜಮಾಅತ್ ಅಧ್ಯಕ್ಷ ಎಂ.ಬಿ.ಜಾಹಿರ್ ಅಹ್ಮದ್, ಪ್ರಮುಖರಾದ ಎಂ.ಎ.ಬಶೀರ್ ಅಹ್ಮದ್ ಪಿ.ಕೆ.ಜಲೀಲ್, ಬಿ.ಎಸ್. ರಫೀಕ್ ಅಹ್ಮದ್, ಎಂ.ಬಿ. ನಾಸೀರ್ ಅಹ್ಮದ್, ಎಂ.ಯು. ವಸೀಮ್ ಅಹ್ಮದ್, ಎಂ.ಎಫ್.ಬಶೀರ್ ಅಹ್ಮದ್, ಜೆ.ಎಂ. ಶರೀಫ್, ಕೆ.ಎಂ. ಇಬ್ರಾಹಿಮ್ ಮುಂತಾದವರು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಕಾಲೇಜು ರಸ್ತೆಯ ಸಿಪಿಸಿ ಲೇಔಟ್ನಲ್ಲಿರುವ ಮಸ್ಜಿದ್ ರಹ್ಮಾದ್ ಉಮ್ಮರ್ ಮೌಲವಿ ಪ್ರವಚನ ನೀಡಿದರು.
ಪ್ರವಾದಿ ಇಬ್ರಾಹಿಮ್ (ಅ) ಅವರು ಹಾಗೂ ಅವರ ಕುಟುಂಬದ ತ್ಯಾಗ ಬಲಿದಾನದ
(ಮೊದಲ ಪುಟದಿಂದ) ಸ್ಮರಣೆಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ..
ದುರದೃಷ್ಟವಶಾತ್ ಇಂದು ಮಹಾಮಳೆಯ ನೆರೆಯಲ್ಲಿ ಬಹುತೇಕ ಮಂದಿ ತಮ್ಮದೆಲ್ಲವನ್ನು ಕಳೆದು ಕೊಂಡು ಸಂತ್ರಸ್ತರಾಗಿದ್ದೇವೆ.
ಇಂತಹ ಸಂದರ್ಭದಲ್ಲಿ ಅವರನ್ನು ಸಂತ್ಯೆಸುವದರ ಜೊತೆಗೆ ಬೇಕಾದ ಆವಶ್ಯಕತೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಮೂರು ಸಾವಿರ ವರುಷಗಳ ಹಿಂದೆ ಪ್ರವಾದಿ ಇಬ್ರಾಹಿಮ್(ಅ) ಇರಾಕಿನ ಉರ್ರ್ ಎಂಬ ಪ್ರದೇಶದಲ್ಲಿ ಅಂದಿನ ಬಂಡವಾಳಶಾಹಿ ಪುರೋಹಿತ ಶಾಹಿಯ ವರ್ಗವು ಜನರನ್ನು ಮೌಡ್ಯ ಮೂಢನಂಬಿಕೆಳ ದಾಳವಾಗಿಸಿ ಶೋಷಣೆ ಮಾಡುತ್ತಿ ದ್ದಾಗ ಪ್ರವಾದಿ ಇಬ್ರಾಹಿಮರು ಅದರ ವಿರುದ್ಧ ಹಗಲು ರಾತ್ರಿಯನ್ನದೇ ಹೋರಾಡಿದರು.
ತನ್ನ ವೃದ್ಧಾಪದಲ್ಲಿ ಏಕೈಕ ಪುತ್ರನನ್ನು ಬಲಿ ಅರ್ಪಿಸಲು ಸಿದ್ಧರಾದ ನಾಗರಿಕತೆಯ ಹರಿಕಾರ ಪ್ರವಾದಿ ಇಬ್ರಾಹಿಮ್ ಪವಿತ್ರ ಕಅಬಾ ಭವನವನ್ನು ನಿರ್ಮಿಸಿ ವಿಶ್ವದ ಶಾಂತಿಗಾಗಿ ಪ್ರಾರ್ಥಿಸಿದ ಸಂತರಾಗಿದ್ದರು..
ಆದರೆ ಇಂದು ಲೋಕದಲ್ಲಿ ಎಲ್ಲೆಲ್ಲಿಯೂ ಅಶಾಂತಿಯ ವಾತಾವರಣ ನಿರ್ಮಾಣ ಗೊಂಡಿದೆ. ನಿರಪರಾದಿಗಳನ್ನು ಹತ್ಯೆ ಮಾಡಲಾಗುತ್ತಿದೆ. ಗುಂಪು ಹತ್ಯೆ ಹಲ್ಲೆ ವ್ಯಾಪಕವಾಗುತ್ತಿದೆ; ಮರ್ದಿತನಿಗೆ ತನ್ನನ್ನು ಯಾಕೆ ಕೊಲ್ಲಲಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಜಾತಿ, ಧರ್ಮ, ಬಾಷೆ, ಪಂಗಡಗಳ ಹೆಸರಿನಲ್ಲಿ ದ್ವೇಷವನ್ನು ಹರಡ ಲಾಗುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಪರಸ್ಪರ ಧರ್ಮಗಳ ಸಾರವನ್ನು ತಿಳಿಸುವ ಪ್ರಕ್ರಿಯೆಗಳು ಪ್ರವಾದಿ ಇಬ್ರಾಹೀಮರು ಏಕ ದೇವತ್ವದ ಪ್ರತಿಪಾದಕರಾಗಿದ್ದರು. ಮಾನವರು ಆದಮ್ರ ಸಂತತಿಗಳಾಗಿದ್ದಾರೆ. ಆ ಏಕ ದೇವನ ಸೃಷ್ಟಿಗಳಾಗಿದ್ದಾರೆ. ಪರಸ್ಪರ ಶಾಂತಿ, ಸಹಬಾಳ್ವೆ ಹಾಗೂ ನೆಮ್ಮದಿಯಿಂದ ಬಾಳಬೇಕು ಎಂದರು.
ಕೂಡಿಗೆಯಲ್ಲಿ ಆಚರಣೆ
ಕೂಡಿಗೆ: ಮುಸಲ್ಮಾನರ ಪವಿತ್ರ ಹಬ್ಬವಾದ ಬಕ್ರೀದ್ ಹಬ್ಬವನ್ನು ಸೋಮವಾರ ಕೂಡಿಗೆಯ ಮೊಹಿದ್ದಿನ್ ಜುಮಾ ಮಸ್ಜಿದ್ ಮತ್ತು ಮುನವ್ವಿರುವ್ ಇಸ್ಲಾಂ ಮದ್ರಸದ ವತಿಯಿಂದ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸುತ್ತಮುತ್ತ ನೆಲೆಸಿರುವ ನೂರಾರು ಮುಸ್ಲಿಂ ಬಾಂಧವರು ಮೊಹಿದ್ದಿನ್ ಜುಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮೊಹಿದ್ದಿನ್ ಜುಮಾ ಮಸೀದಿಯ ಅಧ್ಯಕ್ಷ ವಿ.ಕೆ. ಖಾದರ್, ಉಪಾಧ್ಯಕ್ಷ ರಜಾಕ್, ನೌಫಲ್, ಕಾರ್ಯದರ್ಶಿ ಸಿರಾಜ್, ಗೌರವಾಧ್ಯಕ್ಷ ಟಿ.ಪಿ. ಹಮೀದ್, ಮಸೀದಿಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಇದ್ದರು.
ಸುಂಟಿಕೊಪ್ಪ : ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂದವರು ಪಟ್ಟಣದಲ್ಲಿರುವ ವಿವಿಧ ಮಸೀದಿಗಳಾದ ಸುನ್ನಿ ಮುಸ್ಲಿಂ ಜಮಯತ್, ಸುನ್ನಿಶಾಫಿ ಜುಮ್ಮ ಮಸೀದಿ, ನೂರಲ್ ಜುಮಾ ಮಸ್ಜೀದ್ ಗದ್ದೆಹಳ್ಳ ಹನಫಿ ಜಮಯತ್ ಮದ್ರಸಗಳಾದ ಮುನವ್ವರಲ್ ಇಸ್ಲಾಂ ಮದ್ರಸ, ಖತೀಜ ಉಮ್ಮ ಮದ್ರಸ, ನೂರಿಯ ಮದ್ರಸ, ಹನಫಿ ಮದ್ರಸಗಳಲ್ಲಿ ನೆರೆ ಸಂತ್ರಸ್ತರಿ ನೊಂದವರಿಗೆ 1 ಗಂಟೆ ಕಾಲ ವಿಶೇಷ ಪ್ರಾರ್ಥನೆ ಮತ್ತು ಧಾರ್ಮಿಕ ಗುರುಗಳು ಪ್ರವಚನ ಮಾಡಿದರು. ಬಕ್ರೀದ್ ಹಬ್ಬದ ಪ್ರಯುಕ್ತ ಮಂಗಳವಾರ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಗದ್ದೆಹಳ್ಳದÀ ಖಬರ್ ಸ್ಥಾನದಲ್ಲಿ ಪ್ರಾಥನೆ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಜಾತ್ಯತೀತ ಜನತಾ ದಳದ ಉಪಾಧ್ಯಕ್ಷ ಎಂ.ಎಂ. ಶರೀಫ್, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್, ಮುನವ್ವರಲ್ ಇಸ್ಲಾಂ ಮದ್ರಸದ ಸದಸ್ಯ ಉಸ್ಮಾನ್, ಕೊಡಗು ಜಿಲ್ಲಾ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಎ. ಉಸ್ಮಾನ್ ಇನ್ನಿತರರು ಪಾಲ್ಗೊಂಡಿದ್ದರು.
ನಾಪೋಕ್ಲುವಿನ ಪರಿಹಾರ ಕೇಂದ್ರವೊಂದರಲ್ಲಿ ಬಕ್ರೀದ್ ಆಚರಣೆ ಮಾಡಲಾಯಿತು.
ಶನಿವಾರಸಂತೆ : ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಿದರು. ಮುಸ್ಲಿಂ ಸಮುದಾಯದವರು ಹಾಗೂ ಮದೀನ ಮಸೀದಿಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಮಳೆಯ ಕಾರಣ ಮುಖ್ಯ ರಸ್ತೆಯಲ್ಲಿ ದೊಡ್ಡ ಮಸೀದಿಯಲ್ಲಿ ಧರ್ಮಗುರುಗಳ ಪ್ರವಚನ ಆಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಮುಸ್ಲಿಂ ಸಮುದಾಯದವರು ವಿಶೇಷ ಪ್ರಾರ್ಥನೆಯ ಬಳಿಕ ನೆರೆ ಸಂತ್ರಸ್ತರಿಗೆ ಸಂತಾಪ ವ್ಯಕ್ತಪಡಿಸಿ ಪ್ರಾರ್ಥಿಸಿದರು. ಹಣ ಸಂಗ್ರಹ ಮಾಡಿ ಸಂತ್ರಸ್ತರಿಗೆ ನರೆವು ಒದಗಿಸಲು ತೀರ್ಮಾನಿಸಿದರು. ಆಡಳಿ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.
ಸೋಮವಾರಪೇಟೆ: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬಗಳಲ್ಲೊಂದಾದ ಬಕ್ರೀದ್ ಹಬ್ಬವನ್ನು ಸೋಮವಾರಪೇಟೆಯ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಭಾರೀ ಮಳೆಯ ಹಿನ್ನೆಲೆ ಸಂಭ್ರಮದ ಆಚರಣೆಯ ಬದಲಿಗೆ ಸಾಂಪ್ರದಾಯಿಕ ಆಚರಣೆಯಲ್ಲಿ ತೊಡಗಿಸಿಕೊಂಡರು.
ಪಟ್ಟಣದ ಹನಫಿ ಜಾಮಿಯಾ ಮಸೀದಿ, ಜಲಾಲಿಯಾ ಮಸೀದಿ, ಕಲ್ಲಂದೂರಿನ ಮಸೀದಿ, ತಣ್ಣೀರುಹಳ್ಳ, ಕಾಗಡಿಕಟ್ಟೆ, ಬಜೆಗುಂಡಿಯ ಖಿಳಾರಿಯಾ ಮಸೀದಿ, ಹೊಸತೋಟ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದ ಪ್ರಾರ್ಥನಾ ಮಂದಿರಗಳಲ್ಲಿ ಬಕ್ರೀದ್ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಿತು.
ಬೆಳಿಗ್ಗೆ ಪ್ರಾರ್ಥನಾ ಮಂದಿರಕ್ಕೆ ಆಗಮಿಸಿದ ಮುಸ್ಲಿಂ ಸಮುದಾ ಯದವರು, ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆಯಲ್ಲಿ ಭಾಗಿಯಾದರು. ಧರ್ಮಗುರು ಗಳಿಂದ ಪ್ರವಚನ ನಡೆಯಿತು. ನಂತರ ಹಬ್ಬದ ಶುಭಾಶಯವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಹೊಸತೋಟದ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಎಸ್.ಎಸ್.ಎಫ್. ಶಾಖೆಯ ಪದಾಧಿಕಾರಿಗಳು, ಪ್ರಾಕೃತಿಕ ವಿಕೋಪದಿಂದ ಸಂತ್ರಸ್ಥರಾಗಿರುವ ಮಂದಿಗೆ ನೆರವಾಗಲೆಂದು ಸಹಾಯ ನಿಧಿ ಸಂಗ್ರಹಿಸಿದರು.
ಕುಶಾಲನಗರ: ಕುಶಾಲನಗರ ಪಟ್ಟಣದಲ್ಲಿ ಬಕ್ರೀದ್ ಹಬ್ಬವನ್ನು ಮುಸ್ಲಿಂ ಸಮುದಾಯದಿಂದ ಆಚರಣೆ ನಡೆಯಿತು. ಕಳೆದ ಕೆಲವು ದಿನಗಳಿಂದ ಕುಶಾಲನಗರ ಪಟ್ಟಣ ಸಂಪೂರ್ಣ ಜಲಾವೃತವಾಗಿದ್ದು ಈ ನಡುವೆ ಬಡಾವಣೆಗಳ ಮುಸ್ಲಿಂ ಬಾಂಧವರು ಕುಶಾಲನಗರ ಪಟ್ಟಣದ ಹಿಲಾಲ್ ಮತ್ತು ಜಾಮಿಯ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.