ಸೋಮವಾರಪೇಟೆ, ಆ.12: ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಕೊತ್ನಳ್ಳಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ತೋಡಿನ ಕಟ್ಟೆ ಒಡೆದು ನಾಟಿ ಮಾಡಿದ್ದ ಗದ್ದೆಗೆ ನೀರು ನುಗ್ಗಿದ್ದು, ಪೈರಿನೊಂದಿಗೆ ಭೂಮಿಯೂ ನಾಶವಾಗಿದೆ. ಪ್ರವಾಹದ ಸನ್ನಿವೇಶ ಬದಲಾಗುತ್ತಿದ್ದಂತೆ ಕೊತ್ನಳ್ಳಿಯಲ್ಲಿ ನಾಟಿ ಕಾರ್ಯ ಬಿರುಸುಗೊಂಡಿದೆ.
ಕೊತ್ನಳ್ಳಿ ಗ್ರಾಮದ ಹೆಚ್.ಎಂ. ಗಣಪತಿ ಎಂಬವರಿಗೆ ಸೇರಿದ ಗದ್ದೆಯ ಮೇಲೆ ತೋಡಿನ ಕಟ್ಟೆ ಒಡೆದು ಹೊಳೆಯಂತೆ ನೀರು ನುಗ್ಗಿದ್ದು, ನಾಟಿ ಮಾಡಿದ್ದ ಗದ್ದೆ ಕೆರೆಯಂತಾಗಿದೆ. ಇದರೊಂದಿಗೆ ನೀರು ಹರಿಯುವ ರಭಸಕ್ಕೆ ಗದ್ದೆಯ ಒಂದು ಭಾಗದಲ್ಲಿ ಮಣ್ಣು ಕುಸಿಯುತ್ತಿದ್ದು, ಗದ್ದೆಯೂ ನಾಶವಾಗುತ್ತಿದೆ.
ತೋಡಿನ ನೀರು ನುಗ್ಗಿದ್ದರಿಂದ ಕೆಳ ಭಾಗದಲ್ಲಿರುವ ಕೆ.ಪಿ. ಪೊನ್ನಪ್ಪ, ಡಿ.ಎನ್. ವಸಂತ್, ಜೋಯಪ್ಪ, ರಮೇಶ್, ಹೆಚ್.ಎನ್. ಪೊನ್ನಪ್ಪ, ರಂಜು, ಹೆಚ್.ಎಂ. ಪ್ರಸನ್ನ, ಶೇಷಪ್ಪ, ಯೋಗೇಂದ್ರ, ಚಂದ್ರ, ಡಿ.ಎ. ದೊಡ್ಡಯ್ಯ ಅವರುಗಳಿಗೆ ಸೇರಿದ ಗದ್ದೆಗಳೂ ಸಹ ಹಾನಿಗೀಡಾಗಿವೆ.
ಇನ್ನು ಕೊತ್ನಳ್ಳಿ ಗ್ರಾಮದ ಮತ್ತೊಂದು ಗದ್ದೆ ಬಯಲಿನಲ್ಲಿ ಪ್ರವಾಹದಂತಹ ನೀರು ಇಳಿಕೆಯಾಗುತ್ತಿದ್ದಂತೆ ನಾಟಿ ಕಾರ್ಯ ಬಿರುಸುಗೊಂಡಿದೆ. ಈವರೆಗೆ ಕೊತ್ನಳ್ಳಿಗೆ 127 ಇಂಚು ಮಳೆಯಾಗಿದೆ. ಕಳೆದ ಮೂರುದಿನಗಳಲ್ಲಿ ಈ ಭಾಗಕ್ಕೆ 43 ಇಂಚು ಮಳೆಯಾಗಿದೆ. ಕಳೆದ 8 ರಿಂದ 10ರವರೆಗೆ ಪ್ರತಿದಿನ 11.50 ಇಂಚು ಸರಾಸರಿ ಮಳೆಯಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಕಳೆದ ಸಾಲಿನಲ್ಲೂ ಸಹ ಭಾರೀ ಮಳೆಗೆ ನಷ್ಟ ಅನುಭವಿಸಿದ್ದು, ಸರ್ಕಾರದಿಂದ ಯಾವದೇ ಪರಿಹಾರ ಲಭಿಸಿಲ್ಲ; ಮಳೆಯಿಂದ ನಿಜವಾಗಿಯೂ ಹಾನಿಗೀಡಾದ ರೈತರನ್ನು ಗುರುತಿಸಿ ಪರಿಹಾರ ವಿತರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಕೊತ್ನಳ್ಳಿ ಗ್ರಾಮದ ಕೃಷಿಕ ರಮೇಶ್ ಅವರು ಆಗ್ರಹಿಸಿದ್ದಾರೆ.
ರಸ್ತೆಗೆ ಹಾನಿ: ಗ್ರಾಮೀಣ ಭಾಗದ ರಸ್ತೆಯ ಬದಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡದೇ ಇರುವದರಿಂದ ಬೆಟ್ಟಗುಡ್ಡಗಳಿಂದ ಇಳಿಯುವ ನೀರು ನೇರವಾಗಿ ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಇದ್ದ ರಸ್ತೆ ಇನ್ನಷ್ಟು ಹಾಳಾಗುತ್ತಿದೆ. ಬೀದಳ್ಳಿಯಿಂದ ಕೊತ್ನಳ್ಳಿ ಗ್ರಾಮ ಸಂಪರ್ಕಿಸುವ ಮುಖ್ಯರಸ್ತೆ ಇನ್ನಿಲ್ಲದಂತೆ ಹಾಳಾಗಿದ್ದು, ವಾಹನ ಸಂಚಾರ ದುಸ್ತರವೆನಿಸಿದೆ. ಕಳೆದ ವರ್ಷ ಹಾಕಲಾಗಿದ್ದ ಡಾಂಬರು ಸಹ ಈ ವರ್ಷದ ಮಳೆಗೆ ಕಿತ್ತುಬಂದಿದೆ.
- ವಿಜಯ್ ಹಾನಗಲ್