ಚೆಟ್ಟಳ್ಳಿ, ಆ. 12: ಎಡಪಾಲ ಅಂಡತಮಾನಿ ಇವರ ಆಶ್ರಯದಲ್ಲಿ ಎಡಪಾಲದಲ್ಲಿ ನಡೆದ ಮೂರನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ವಾಲಿಬಾಲ್ ಪಂದ್ಯಾಟದಲ್ಲಿ ಬುಲ್ಲೆಟ್ ಫ್ರೆಂಡ್ಸ್ ಕೊಂಡಂಗೇರಿ ತಂಡವು ಪ್ರಥಮ ಸ್ಥಾನವನ್ನು ಪಡೆದಿದೆ. ದ್ವಿತೀಯ ಸ್ಥಾನವನ್ನು ಹಾಸನ ಫ್ರೆಂಡ್ಸ್ ಹಾಸನ ತಂಡವು ಪಡೆದುಕೊಂಡಿದೆ.

ಹಾಸನ ಜಿಲ್ಲೆಯ ತಂಡ ಹಾಗೂ ಕೊಡಗು ಜಿಲ್ಲೆಯ ತಂಡವಾದ ಅಂದಾಯಿ ನಾಯಕತ್ವದ ಕೊಂಡಂಗೇರಿ ಬುಲ್ಲೆಟ್ ಫ್ರೆಂಡ್ಸ್ ತಂಡಗಳ ನಡುವಿನ ಜಿದ್ದಾಜಿದ್ದಿನ ಫೈನಲ್ ಪಂದ್ಯಾಟವು ಪ್ರೇಕ್ಷಕರ ಗಮನ ಸೆಳೆದಿತು.

2-0 ನೇರ ಸೆಟ್‍ಗಳಿಂದ ಹಾಸನ ತಂಡವನ್ನು ಬುಲ್ಲೆಟ್ ಫ್ರೆಂಡ್ಸ್ ತಂಡವು ಮಣಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಬುಲ್ಲೆಟ್ ಫ್ರೆಂಡ್ಸ್ ಕೊಂಡಂಗೇರಿ ತಂಡವು ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡವನ್ನು 2-1 ಸೆಟ್‍ಗಳಿಂದ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿತ್ತು. ಎರಡನೇ ಸೆಮಿಫೈನಲ್ ಪಂದ್ಯವು ಹಾಸನ ಫ್ರೆಂಡ್ಸ್ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜು ನಡುವೆ ನಡೆಯಿತು. ಪಂದ್ಯದಲ್ಲಿ ಹಾಸನ ಫ್ರೆಂಡ್ಸ್ ತಂಡವು 2-0 ನೇರ ಸೆಟ್‍ಗಳಿಂದ ವಿಜಯಗಳಿಸಿ ಫೈನಲ್ ಪ್ರವೇಶಿಸಿತು.

ವಾಲಿಬಾಲ್ ಪಂದ್ಯಾಟದ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಬುಲ್ಲೆಟ್ ಫ್ರೆಂಡ್ಸ್ ತಂಡದ ನಾಯಕ ಅಬ್ದುರಹಮಾನ್ (ಅಂದಾಯಿ) ಹಾಗೂ ಅತ್ಯುತ್ತಮ ಪಾಸರ್ ಪ್ರಶಸ್ತಿಯನ್ನು ಅದೇ ತಂಡದ ಅನೀಸ್ ಪಡೆದುಕೊಂಡರು. ಚಾಂಪಿಯನ್ ತಂಡವಾದ ಬುಲ್ಲೆಟ್ ಫ್ರೆಂಡ್ಸ್ ತಂಡದ ಪರವಾಗಿ, ಅಬ್ದುರಹಮಾನ್ (ಅಂದಾಯಿ), ಅನೀಸ್, ಆಪು, ಅಸ್ಕಲ್, ಕಬೀರ್, ಮುಲ್ಲಾ ಆಡಿದರು.

ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಅಬ್ದುಲ್ಲಾ ಎಡಪಾಲ, ಝಕರಿಯಾ, ಕರೀಂ, ಲಿಮ್ರಾ ಫ್ರೆಂಡ್ಸ್ ಸಾಬಿತ್ ಇದ್ದರು.