ಗೋಣಿಕೊಪ್ಪಲು, ಆ.12: ಕೊಡಗು ಜಿಲ್ಲೆಗೆ ಮುಂಗಾರು ಮಾರುತದೊಂದಿಗೆ ಬಂದು ಯಥೇಚ್ಚವಾಗಿ ಮಳೆಸುರಿಸುವದೇ ಇದೇ ಮಾಕುಟ್ಟ ಮಳೆಕಾಡುಗಳು. ಆದರೆ, ಕಳೆದ ಮೂರು ವರ್ಷದಿಂದ ಮಾಕುಟ್ಟದ ಕೆರ್ಟಿ, ಉರ್ಟಿ ಅರಣ್ಯ ಶ್ರೇಣಿಗಳು, ಬೃಹ್ಮಗಿರಿ ವನ್ಯಜೀವಿ ವಲಯಗಳು ಸ್ವಾಭಾವಿಕ ಮಳೆಗೆ ಕಾರಣವಾಗದೆ, ಅತಿವೃಷ್ಟಿಗೆ ಕಾರಣವಾಗಿವೆÉ. ಕಾಕತಾಳೀಯ ಎಂಬಂತೆ ಮಾಕುಟ್ಟ ಕೇರಳ ಅಂತರರಾಜ್ಯ ಹೆದ್ದಾರಿಯಲ್ಲಿ ಮೊದಲಿಗೆ ಜಲಸ್ಫೋಟ ಸಂಭವಿಸಿದ ನಂತರವೇ ಜಿಲ್ಲೆಯ ಇತರೆಡೆ ಭಾರೀ ಅನಾಹುತ ಸಂಭವಿಸುತ್ತಿದೆ.
ಎರಡು ವರ್ಷದ ಹಿಂದೆ ಇಲ್ಲಿನ ವೀರಾಜಪೇಟೆ- ಮಾಕುಟ್ಟ- ಕೇರಳ ರಾಜ್ಯ ಹೆದ್ದಾರಿಯಲ್ಲಿ ಪೆರುಂಬಾಡಿ ಸಮೀಪ ಕೆರ್ಟಿ ಅರಣ್ಯ ಶ್ರೇಣಿಗೆ ಒಳಪಟ್ಟ ಕೆರೆಯೊಂದು ಇಲ್ಲಿನ ರಸ್ತೆಯನ್ನು ಇಬ್ಭಾಗ ಮಾಡಿತು. ಇದೇ ಸಂದರ್ಭ ಬಿರುನಾಣಿ ವ್ಯಾಪ್ತಿಯಲ್ಲಿ ಕಾಫಿ ತೋಟದ ಬೆಟ್ಟವೊಂದು ಸ್ಫೋಟಗೊಂಡು ಹತ್ತಾರು ಎಕರೆ ಕಾಫಿ ತೋಟ ಜಲಸಮಾಧಿಯಾಯಿತು. ನಂತರ ಜಿಲ್ಲೆಯ ಅಲ್ಲಲ್ಲಿ ಸಣ್ಣ ಪುಟ್ಟ ಅನಾಹುತಗಳೊಂದಿಗೆ ಮಡಿಕೇರಿ- ಮಂಗಳೂರು ರಾಜ್ಯ ಹೆದ್ದಾರಿ ರಸ್ತೆಯೂ ಇಬ್ಭಾಗವಾಯಿತು. ಜೀವಹಾನಿ ಮೊದಲಿಗೆ ಸಂಭವಿಸದಿದ್ದರೂ ನಂತರ ರಸ್ತೆ ಅಭಿವೃದ್ಧಿ ತೀವ್ರ ಸವಾಲನ್ನು ಒಡ್ಡಿತ್ತು.
ನಂತರದ ವರ್ಷ (ಕಳೆದ ವರ್ಷ) ಮಾಕುಟ್ಟ ವ್ಯಾಪ್ತಿಯಲ್ಲಿ ಮೂರು ನಾಲ್ಕು ದಿನಗಳ ಅವಧಿಯಲ್ಲಿ ರಣಭೀಕರ ಮಳೆ ಸುರಿಯಿತು. ಸುಮಾರು 25 ಇಂಚಿಗೂ ಅಧಿಕ ಸುರಿದ ಮಳೆಗಾಳಿಗೆ ಮಾಕುಟ್ಟ ಅರಣ್ಯ ವ್ಯಾಪ್ತಿಯ ಬೆಟ್ಟಗುಡ್ಡಗಳಲ್ಲಿ ಜಲಸ್ಪೋಟಗೊಂಡಿತು. ಭಾರೀ ಬಂಡೆಕಲ್ಲುಗಳು ರಸ್ತೆಗೆ ಉರುಳಿದ ಪರಿಣಾಮ ಯುವಕನೊಬ್ಬ ಮೊದಲಿಗೆ ಜಿಲ್ಲೆಯಲ್ಲಿ ಸಾವನ್ನಪ್ಪಿದ. ನಂತರ ಅದೇ ದಿನ (ಜುಲೈ 13, 2018) ರಾತ್ರಿ 9 ಗಂಟೆಗೆ ಸುಮಾರಿಗೆ ಮಾಕುಟ್ಟ ಮುತ್ತಪ್ಪ ದೇವಸ್ಥಾನ ಹಿಂಭಾಗದ ನಿವಾಸಿ ಜಲಸಮಾಧಿಯಾದರು. ಈ ಘಟನೆಯ ನಂತರ ಅಂದರೆ ಆಗಸ್ಟ್ ತಿಂಗಳಿನಲ್ಲಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಫಿ ತೋಟ, ಅಭಯಾರಣ್ಯ ಒಳಗೊಂಡಂತೆ ಬೆಟ್ಟಗಳು ಸ್ಪೋಟಗೊಂಡು ಜಲಪ್ರಳಯಕ್ಕೆ ಕಾರಣವಾಯಿತು. ಸುಮಾರು 22 ಮಂದಿ ಜೀವಕಳೆದುಕೊಳ್ಳುವಂತಾಯಿತು.
ಈ ಬಾರಿಯೂ ಚಿತ್ರಣ ಬದಲಾಗಲಿಲ್ಲ. ಆಗಸ್ಟ್ 5 ರಂದು ಮಾಕುಟ್ಟದ ಪೆರುಂಬಾಡಿ ಸಮೀಪದ ದುರಸ್ತಿಗೊಂಡ ರಸ್ತೆ ಮತ್ತೊಮ್ಮೆ ಕುಸಿದು ರಸ್ತೆ ಸಂಚಾರ ನಿಷೇಧಕ್ಕೆ ಒಳಗಾಯಿತು. ನಂತರ 6,7,8,9 ರಂದು ಕೊಡಗು ಜಿಲ್ಲೆಯ ಭಾಗಮಂಡಲ, ತೋರ, ಕುಶಾಲನಗರ ಹಾಗೂ ಗೋಣಿಕೊಪ್ಪಲಿನಲ್ಲಿ ಕುಂಭದ್ರೋಣ ಆಶ್ಲೇಷಾ ಮಳೆ ಜಲಪ್ರಳಯಕ್ಕೆ ಕಾರಣವಾಯಿತು. ತೋರ ಮತ್ತು ಭಾಗಮಂಡಲದಲ್ಲಿ ಬೆಟ್ಟಕುಸಿದು ಸುಮಾರು 7 ಮಂದಿ ಸಾವಿಗೆ ಶರಣರಾದರು. ಇನ್ನೂ 8 ಮಂದಿ ಕಣ್ಮರೆಯಾಗಿದ್ದಾರೆ.
ಕೊಡಗಿಗೆ ಮಳೆ ಹರಿಸುವ ಮಾಕುಟ್ಟ - ಕೇರಳ ಅಂತರಾಜ್ಯ ಹೆದ್ದಾರಿಯ ಆಸು ಪಾಸಿನ ಮಳೆಕಾಡುಗಳು ಇನ್ನಷ್ಟು ಅನಾಹುತಗಳಿಗೆ ಕಾರಣವಾಗಿವೆ. ರಸ್ತೆ ಸಂಚಾರ ನಿಷೇಧದಿಂದಾಗಿ ಮಾನವಹಾನಿಯ ಮತ್ತಷ್ಟು ಘಟನಾವಳಿಗಳು ತಪ್ಪಿದೆ. ಮಾಕುಟ್ಟ ರಸ್ತೆಯಲ್ಲಿ ಸಿಗುವ ಹನುಮಾನ್ ದೇವಾಲಯ ಮುಂಭಾಗದ ರಸ್ತೆ ಸಮೀಪದ ಬೆಟ್ಟವೊಂದು ಸ್ಫೋಟಗೊಂಡು ಭಾರೀ ಬಂಡೆಕಲ್ಲುಗಳು ರಸ್ತೆ ಉದ್ದಕ್ಕೂ ಉರುಳಿವೆ. ಬೆಟ್ಟಕುಸಿತದ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದು ಇದೀಗ ವೀರಾಜಪೇಟೆ ಲೋಕೋಪಯೋಗಿ ಇಲಾಖೆ ಜೆಸಿಬಿ ಮೂಲಕ ರಸ್ತೆ ಮೇಲೆ ಬಿದ್ದ ಮಣ್ಣು, ಬಂಡೆಯನ್ನು ಈಗಾಗಲೇ ತೆರವುಗೊಳಿಸಿದೆ ಎನ್ನಲಾಗಿದೆ.
ಇಷ್ಟೇ ಆದರೆ ಪರವಾಗಿಲ್ಲ. ಇದೀಗ ಕೇವಲ 4-5 ದಿನಗಳಲ್ಲಿ ಭಾರೀ ಮಳೆ - ಗಾಳಿಗೆ ಮಾಕುಟ್ಟ ರಸ್ತೆಯ ಉದ್ದಕ್ಕೂ ಸುಮಾರು 25ಕ್ಕೂ ಅಧಿಕ ಮರಗಳು ಉರುಳಿವೆ. ರಸ್ತೆಯಲ್ಲಿ ವಾಹನ ಸಂಚಾರವಿದ್ದಲ್ಲಿ ಹಲವು ಜೀವಹಾನಿಗೆ ಇದು ಕಾರಣವಾಗುತ್ತಿತ್ತು.
ಅಂತರರಾಜ್ಯ ಹೆದ್ದಾರಿಯುದ್ದಕ್ಕೂ ಬೀಳುತ್ತಿರುವ ಮರಗಳನ್ನು ತೆರವು ಮಾಡುವ ಕಾರ್ಯಾಚರಣೆ ನಿರಂತರವಾಗಿ ನಡೆದಿದೆ. ಕಳೆದ ವರ್ಷ ಮಾಕುಟ್ಟ ಅರಣ್ಯದ ಮೇಲೆ ಸುಮಾರು 199 ಇಂಚಿಗೂ ಅಧಿಕ ಮಳೆ ದಾಖಲಾಗಿತ್ತು. ಕಳೆದ ವರ್ಷ ಆಗಸ್ಟ್ 10 ರವರೆಗೆ ಸುಮಾರು 83.52 ಇಂಚು ಮಳೆ ದಾಖಲಾಗಿತ್ತು. ಈ ಬಾರಿಯೂ ಮಾಕುಟ್ಟದ ಮೇಲೆ ಆಗಸ್ಟ್ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹೆಚ್ಚೂ ಕಮ್ಮಿ 85 ಇಂಚಿಗೂ ಅಧಿಕ ಮಳೆ ದಾಖಲಾಗಿದೆ. ಕಳೆದ ಬಾರಿಗಿಂತಲೂ ಅಧಿಕ ಮಳೆಯಾಗಿದೆ.
ಸಾಧಾರಣವಾಗಿ ಓಣಂ, ರಂಜಾನ್ ಮತ್ತು ಬಕ್ರೀದ್ ತಿಂಗಳಿನಲ್ಲಿ ಕೇರಳ-ಕೊಡಗು ನಿವಾಸಿಗಳ ಅಧಿಕ ವಾಹನ ಸಾಂದ್ರತೆ ಕಂಡು ಬರುತ್ತದೆ. ಈ ಬಾರಿ ರಸ್ತೆ ಕಾಮಗಾರಿ, ತಡೆಗೋಡೆ ಕಾಮಗಾರಿ ಇನ್ನೂ ಮುಗಿಯದ ಹಿನ್ನೆಲೆ ನೆರೆಯ ಕೇರಳಕ್ಕೆ ಕೊಡಗಿನ ಮಾಕುಟ್ಟ ಹಾಗೂ ಮಾನಂದವಾಡಿಯ ಮಾರ್ಗ ಬಸ್ ಸಂಚಾರ ರದ್ದಾಗಿದೆ. ಲಘು ವಾಹನಗಳ ಓಡಾಟ ಮಾತ್ರ ಗೋಣಿಕೊಪ್ಪಲು-ಕುಟ್ಟ ಮಾರ್ಗ ಕಂಡು ಬಂದಿದೆ. ಮಾಕುಟ್ಟ ರಸ್ತೆ ದುರಸ್ತಿಗೆ ಇನ್ನೂ ಕಾಲವಕಾಶ ಬೇಕಾಗಬಹುದು. ಈ ರಸ್ತೆ ವರ್ಷದಿಂದ ವರ್ಷಕ್ಕೆ ಜಲಸ್ಫೋಟದಿಂದಾಗಿ ಅಪಾಯಕಾರಿಯಾಗಿ ಕಂಡು ಬಂದಿದೆ. ಗುಣಮಟ್ಟದ ಕಾಮಗಾರಿಯ ಅಗತ್ಯವಿದ್ದು, ಲೋಕೋಪಯೋಗಿ ಇಲಾಖೆ ಕೈಗೊಂಡ ದುರಸ್ತಿ ಕಾಮಗಾರಿಯ ಲೋಪದಿಂದಾಗಿ ಮತ್ತೆ ಮತ್ತೆ ಅದೇ ಸ್ಥಳದಲ್ಲಿ ರಸ್ತೆ ಇಬ್ಭಾಗವಾಗುತ್ತಿರುವದೂ ಸಮಸ್ಯೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಕಾಕತಾಳೀಯ ಎಂಬಂತೆ ಮಾಕುಟ್ಟ ರಸ್ತೆಯ ಇಬ್ಭಾಗ ಬರೆಕುಸಿತ, ಬೆಟ್ಟಕುಸಿತ, ರಸ್ತೆ ಕುಸಿತ ಜಲಸ್ಫೋಟದ ನಂತರವೇ ಜಿಲ್ಲೆಯ ಇತರೆಡೆ ಜಲಪ್ರಳಯ ಸಂಭವಿಸುತ್ತಿರುವದು ದುರಂತ. ಕೇರಳ ಮಾದರಿಯ ರಸ್ತೆ ಇಬ್ಬದಿ ಗುಣಮಟ್ಟದ ತಡೆಗೋಡೆ ಕಾಮಗಾರಿ ಅಗತ್ಯವಾಗಿದೆ.
ಜಿಲ್ಲೆಯ ನೀರು ಕೇರಳದ ತೊಟ್ಟಿಪಾಲ, ಪೆರಟ್ಟ, ವಳ್ಳಿತೋಡು ಭಾಗದಲ್ಲಿಯೂ ಹರಿಯುತ್ತಿದ್ದು, ಕಳೆದ 80 ವರ್ಷದ ಅವಧಿಯಲ್ಲಿ ಕಂಡು ಕೇಳರಿಯದ ಪ್ರವಾಹ ಈ ಭಾಗದಲ್ಲಿಯೂ ಉಂಟಾಗಿದೆ ಎನ್ನಲಾಗಿದೆ. ಈ ಬಾರಿ ಮಾಕುಟ್ಟದ ಚೀಪೆಹೊಳೆ ಪ್ರವಾಹ ಅಲ್ಲಿನ ಪೆÇಲೀಸ್ ಚೆಕ್ಪೆÇೀಸ್ಟ್ ಸಮೀಪ ಸೇತುವೆ ಮೇಲೆ ಹರಿಯದಿರುವದು ಹಾಗೂ ಭಾರೀ ಗಾತ್ರದ ಮರಗಳು ಕಳೆದ ವರ್ಷದಂತೆ ಪ್ರವಾಹದಲ್ಲಿ ಕೊಚ್ಚಿಕೊಂಡು ಬರದಿರುವದು ಸಮಾಧಾನದ ಸಂಗತಿಯಾಗಿದೆ.
- ವರದಿ: ಟಿ.ಎಲ್.ಶ್ರೀನಿವಾಸ್