ಪೊನ್ನಂಪೇಟೆ, ಆ. 13: ದಕ್ಷಿಣ ಕೊಡಗಿನ ಪ್ರೇಕ್ಷಣೀಯ ಸ್ಥಳವಾದ ಶ್ರೀಮಂಗಲ ಸಮೀಪದ ಇರ್ಪು ಜಲಪಾತ ಇತ್ತೀಚೆಗೆ ಎಡೆಬಿಡದೆ ಸುರಿದ ಭಾರೀ ಮಳೆಯಿಂದಾಗಿ ಮೈದುಂಬಿಕೊಂಡು ಬೋರ್ಗರೆಯುತ್ತಾ ದುಮ್ಮಿಕ್ಕುತ್ತಿರುವ ದೃಶ್ಯ ನಯನ ಮನೋಹರವಾಗಿದ್ದು, ಲಕ್ಷ್ಮಣ ತೀರ್ಥ ನದಿಯಿಂದ ಉಂಟಾಗಿರುವ ಜಲಧಾರೆಯ ಸೊಬಗು ರುದ್ರ ರಮಣೀಯ ವಾಗಿದೆ. ಆದರೆ ಕಡಿದಾದ ಬಂಡೆಗಳ ಮೇಲೆ ಬಳುಕುತ್ತಾ ವೈಯಾರದಿಂದ ನಾಟ್ಯವಾಡುತ್ತಾ ಸಾಗಿಬರುತ್ತಿರುವ ಜಲ ಮಯೂರಿಯ ರುದ್ರ ನರ್ತನವನ್ನು ನೋಡುವ ಸೌಭಾಗ್ಯ sಸದÀ್ಯಕಂತೂ ಪ್ರವಾಸಿಗರ ಪಾಲಿಗೆ ಇಲ್ಲವಾಗಿದೆ. ಇದಕ್ಕೆ ಕಾರಣ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಸಂಭವಿಸಿರುವ ಭೂಕುಸಿತ.ಎರಡು ಕಡೆ ಭೂಕುಸಿತ: ಬ್ರಹ್ಮಗಿರಿ ಬೆಟ್ಟದಲ್ಲಿ ಭೂಕುಸಿತ ಉಂಟಾಗಿದ್ದು ಇರ್ಪು ಶ್ರೀ ರಾಮೇಶ್ವರ ದೇವಾಲಯದಿಂದ ಜಲಪಾತಕ್ಕೆ ನಡೆದುಕೊಂಡು ಹೋಗುವ ಮಾರ್ಗ ಎರಡು ಕಡೆ ಹಾನಿಗೊಳಗಾಗಿದೆ. ದೇವಾಲಯದ ಗೇಟಿನಿಂದ ಸ್ವಲ್ಪದೂರದಲ್ಲಿ ರಸ್ತೆಯ ಎಡ ಭಾಗದಲ್ಲಿ ನೀರಿನ ರಭಸಕ್ಕೆ ಬೆಟ್ಟ ಕುಸಿದಿದ್ದು ನಡಿಗೆಯ ಮಾರ್ಗ ಕೆಸರಿನಿಂದ ತುಂಬಿ ಹೋಗಿದೆ. ಹಲವಾರು ಮರಗಳು ಧರೆಗುರುಳಿರುವದರಿಂದ ಮಾರ್ಗ ಮುಚ್ಚಿಹೋಗಿದೆ. ತೂಗು ಸೇತುವೆಗೆ ಯಾವದೇ ಹಾನಿ ಸಂಭವಿಸಿಲ್ಲ ಆದರೆ ತೂಗು ಸೇತುವೆಯಿಂದ ಸ್ವಲ್ಪ ಮುಂದೆ ಬಲ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಸಂಭವಿಸಿದ್ದು, ನೀರಿನ ರಭಸಕ್ಕೆ ನಡಿಗೆಯ ಮಾರ್ಗದಲ್ಲಿದ್ದ ಮೆಟ್ಟಿಲುಗಳು ಕೊಚ್ಚಿಹೋಗಿವೆ. ಮಾರ್ಗ ಮಧ್ಯೆ ದೊಡ್ಡ ಕಂದಕವನ್ನು ಸೃಷ್ಟಿ ಮಾಡಿದ್ದು ಸುಮಾರು 20 ಅಡಿಯವರೆಗೆ ರಸ್ತೆ ಮಾಯವಾಗಿದೆ. ಇದನ್ನು ಸರಿಪಡಿಸಲು ಬಹಳ ದಿನಗಳೇ ಬೇಕಾಗಬಹುದೇನೋ ಎನ್ನುವಷ್ಟರ ಮಟ್ಟಿಗೆ ಹಾನಿಗೊಳಗಾಗಿದೆ.(ಮೊದಲ ಪುಟದಿಂದ)

ಪ್ರವಾಸಿಗರಿಗೆ ಪ್ರವೇಶ ಬಂದ್: ಕಳೆದೆರಡು ದಿನಗಳಿಂದ ಮಳೆ ಬಿಡುವು ಕೊಟ್ಟಿರುವ ಕಾರಣ, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಇರ್ಪು ಜಲಪಾತ ಮೈದುಂಬಿಕೊಂಡಿರುವದನ್ನು ಕಣ್ಣಾರೆ ನೋಡಿ ಆನಂದ ಪಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಜಲಪಾತಕ್ಕೆ ತೆರಳುವ ಮಾರ್ಗ ಹಾನಿಗೊಳಗಾಗಿರುವದರಿಂದ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಲಾಗಿದ್ದು, ದೂರದೂರಿಂದ

ಬಂದ ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಸೆಯಿಂದ ವಾಪಸು ಹೋಗುತ್ತಿದ್ದಾರೆ.

“ನನ್ನ 56 ವರ್ಷದ ಜೀವನದಲ್ಲಿ ಇರ್ಪು ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿರಲಿಲ್ಲ, ಒಂದು ವಾರದವರೆಗೆ ಬಿಡುವು ನೀಡದೇ ಧಾರಾಕಾರವಾಗಿ ಮಳೆ ಸುರಿದಿರುವ ಕಾರಣ ನೀರಿನ ರಭಸಕ್ಕೆ ಕೊರೆತ ಉಂಟಾಗಿ ಬೆಟ್ಟದ ಕೆಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ. ಬ್ರಹ್ಮಗಿರಿ ಬೆಟ್ಟಕ್ಕೆ ಚಾರಣ ತೆರಳುವ ಮಾರ್ಗದಲ್ಲಿಯೂ ಕೂಡ ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ” ಎಂದು ಗೌರವಾನ್ವಿತ ವನ್ಯ ಜೀವಿ ಪರಿಪಾಲಕ ಬೋಸ್ ಮಾದಪ್ಪ ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಧ್ಯದಲ್ಲೇ ರಸ್ತೆ ಸರಿಪಡಿಸುವ ಕಾರ್ಯ ಕೈಗೆತ್ತಿಕೊಳ್ಳುತ್ತಿದ್ದು, ಒಂದು ತಿಂಗಳೊಳಗೆ ಜಲಪಾತಕ್ಕೆ ತೆರಳುವ ರಸ್ತೆಯನ್ನು ಸರಿ ಪಡಿಸಿ ಮತ್ತೆ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗುವದು ಎಂದು ಶ್ರೀ ಇರ್ಪು ರಾಮೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಮದ್ರೀರ ವಿಷ್ಣು ತಿಳಿಸಿದ್ದಾರೆ.

-ಚಿತ್ರ, ವರದಿ: ಚನ್ನನಾಯಕ