ಸೋಮವಾರಪೇಟೆ,ಆ.11: ಕಳೆದ ಒಂದು ವಾರದಿಂದ ಆರ್ಭಟಿಸಿದ ವಾಯು-ವರುಣ ಇಂದು ಕೊಂಚ ಬಿಡುವು ನೀಡಿದಂತೆ ಕಂಡುಬಂದಿದ್ದು, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಜನಜೀವನ ಕೊಂಚ ನಿರಾಳವಾಗಿದೆ.
ವಾರದಿಂದ ಸುರಿದ ಭಾರೀ ಮಳೆಗೆ ಗ್ರಾಮೀಣ ಪ್ರದೇಶದ ಎಲ್ಲೆಲ್ಲೂ ಜಲದ ಬುಗ್ಗೆಗಳು ಉಗಮವಾಗಿದ್ದು, ಗರ್ವಾಲೆ-ಸೂರ್ಲಬ್ಬಿ ರಸ್ತೆಯ ಮಧ್ಯ ಭಾಗದಲ್ಲೇ ಡಾಂಬರನ್ನು ಸೀಳಿಕೊಂಡು ಜಲದ ಬುಗ್ಗೆ ಉಕ್ಕುತ್ತಿದೆ.
ಸೋಮವಾರಪೇಟೆ ಪಟ್ಟಣ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಯು-ವರುಣನಾರ್ಭಟ ತಗ್ಗಿದೆ. ಪಟ್ಟಣದಲ್ಲಿ ಒಂದಿಷ್ಟು ಜನಸಂಚಾರ ಕಂಡುಬರುತ್ತಿದ್ದು, ವ್ಯಾಪಾರ ವಹಿವಾಟು ಮಾತ್ರ ನಿಂತ ನೀರಾಗಿದೆ. ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಮಳೆ ತಗ್ಗಿದ್ದರೂ ನೀರಿನ ಹರಿವು ಮಾತ್ರ ಇಳಿಕೆಯಾಗಿಲ್ಲ.
ಸಣ್ಣಪುಟ್ಟ ನದಿತೊರೆ, ಕೆರೆ ಕಟ್ಟೆ, ತೋಡುಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಕಟ್ಟೆಗಳು ಒಡೆದಿರುವ ಪರಿಣಾಮ ಗದ್ದೆಗಳಿಗೆ ನೀರು ನುಗ್ಗಿ ಕೃಷಿ ನಷ್ಟವಾಗಿದೆ. ಈಗಷ್ಟೇ ನಾಟಿ ಮಾಡಿದ್ದ ಪೈರು ನೀರಿನ ಹರಿವಿಗೆ ಸಿಲುಕಿ ಕೆಲವೆಡೆ ಕೊಚ್ಚಿಕೊಂಡು ಹೋಗಿದ್ದರೆ, ಹಲವೆಡೆ ಮರಳು, ಮಣ್ಣು ತುಂಬಿ ನಾಟಿ ಮಾಡಿದ್ದ ಗದ್ದೆಗಳು ಮುಚ್ಚಿಹೋಗಿವೆ. ತಾಲೂಕಿನ ಕೊತ್ನಳ್ಳಿ ಗ್ರಾಮದಲ್ಲಿ ತೋಡಿನ ಕಟ್ಟೆ ಒಡೆದು ಗದ್ದೆಗಳಿಗೆ ನೀರು ನುಗ್ಗಿ ಕೃಷಿ ನಷ್ಟವಾಗಿದೆ.
ಕಳೆದ ಒಂದು ವಾರದಿಂದ ಎಡೆಬಿಡದೇ ಸುರಿದ ಭಾರೀ ಮಳೆಗೆ ಗ್ರಾಮೀಣ ಪ್ರದೇಶದ ರಸ್ತೆಗಳು ಇನ್ನಿಲ್ಲದಂತೆ ಹದಗೆಟ್ಟಿವೆ. ಕೂತಿ, ಕುಡಿಗಾಣ, ಕೊತ್ನಳ್ಳಿ, ಬೀದಳ್ಳಿ, ಬೆಟ್ಟದಳ್ಳಿ, ಸಿದ್ಧಾರ್ಥನಗರ, ಹಂಚಿನಳ್ಳಿ ಭಾಗದ ಡಾಂಬರು ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಸಂಚಾರ ದುಸ್ತರವಾಗಿದೆ.
ರಸ್ತೆಯ ಬದಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡದೇ ಇರುವದರಿಂದ ಬೆಟ್ಟಗುಡ್ಡಗಳಿಂದ ಇಳಿಯುವ ನೀರು ನೇರವಾಗಿ ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಇದ್ದ ರಸ್ತೆ ಇನ್ನಷ್ಟು ಹಾಳಾಗುತ್ತಿದೆ. ಭಾರೀ ಗಾಳಿಯಿಂದಾಗಿ ತೋಟಗಳಲ್ಲಿ ಅಸಂಖ್ಯಾತ ಮರಗಳು ಉರುಳಿ ಬಿದ್ದಿವೆ. ಕಾಫಿ, ಏಲಕ್ಕಿ ತೋಟಗಳಲ್ಲಿ ಕಾಡು ಜಾತಿಯ ವಿವಿಧ ಮರಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಸಿಲ್ವರ್ ಮರಗಳು ನೆಲಕ್ಕುರುಳಿದ್ದು, ಕಾಫಿ ಗಿಡಗಳಿಗೂ ಹಾನಿಯುಂಟಾಗಿವೆ.
ಇದರೊಂದಿಗೆ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿರುವ ಪರಿಣಾಮ ಕೊತ್ನಳ್ಳಿ, ಕುಡಿಗಾಣ, ಹಂಚಿನಳ್ಳಿ, ಬೆಂಕಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಕಳೆದ 10 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಮೇಲೆ ಬಿದ್ದಿರುವ ಮರಗಳನ್ನು ಗ್ರಾಮಸ್ಥರೇ ಕಡಿದು ತೆರವುಗೊಳಿಸುವ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಂಡಿದ್ದರೆ, ಮುರಿದು ಬಿದ್ದಿರುವ ವಿದ್ಯುತ್ ಕಂಬಗಳನ್ನು ದುರಸ್ತಿ ಪಡಿಸಲು ಈ ಭಾಗಕ್ಕೆ ಇಂದಿಗೂ ಚೆಸ್ಕ್ ಅಧಿಕಾರಿ-ಸಿಬ್ಬಂದಿಗಳು ಬಂದಿಲ್ಲ ಎಂದು ಕುಡಿಗಾಣ ಗ್ರಾಮದ ಸುಧಿನ್‍ಕುಮಾರ್ ತಿಳಿಸಿದ್ದಾರೆ.
ತಾಲೂಕಿನ ಸೂರ್ಲಬ್ಬಿ ಗ್ರಾಮ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಇಲ್ಲಿಯವರೆಗೆ 145 ಇಂಚಿನಷ್ಟು ಮಳೆಯಾಗಿದೆ. ಕಳೆದ 4 ದಿನಗಳಲ್ಲೇ 43 ಇಂಚು ಮಳೆಯಾಗಿದೆ ಎಂದು ನಾಣಿಯಪ್ಪ ಅವರು ಮಾಹಿತಿ ನೀಡಿದ್ದಾರೆ. ಮಲ್ಲಳ್ಳಿ ಜಲಪಾತದಿಂದ 2 ಕಿ.ಮೀ. ಅಂತರದ ಹಂಚಿನಳ್ಳಿ ಗ್ರಾಮಕ್ಕೆ ಈವರೆಗೆ 126 ಇಂಚು ಮಳೆ ದಾಖಲಾಗಿದೆ ಎಂದು ಪೊನ್ನಪ್ಪ ತಿಳಿಸಿದ್ದಾರೆ.
ಕೊತ್ನಳ್ಳಿ ಭಾಗಕ್ಕೆ ಈವರೆಗೆ 120 ಇಂಚು ಮಳೆಯಾಗಿದೆ. ಕಳೆದ ಮೂರುದಿನಗಳಲ್ಲಿ ಈ ಭಾಗಕ್ಕೆ 43 ಇಂಚು ಮಳೆಯಾಗಿದೆ. ಕಳೆದ 8 ರಿಂದ 10ರವರೆಗೆ ಪ್ರತಿದಿನ 11.50 ಇಂಚು ಮಳೆಯಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಹರಗ ವ್ಯಾಪ್ತಿಯಲ್ಲಿ ಈವರೆಗೆ 120 ಇಂಚು ಮಳೆಯಾಗಿರುವ ಬಗ್ಗೆ ಶರಣ್ ತಿಳಿಸಿದ್ದಾರೆ.
ಕೊಡ್ಲಿಪೇಟೆ-ಹೇಮಾವತಿಯಲ್ಲಿ ಮೃತದೇಹ: ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಗಡಿಭಾಗ ಹೇಮಾವತಿ ನದಿಯಲ್ಲಿ ಇಂದು ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. ಕಳೆದ ಒಂದು ವಾರಗಳ ಹಿಂದೆಯೇ ನೀರಿಗೆ ಬಿದ್ದಿರಬಹುದಾದ ಸಂಶಯ ವ್ಯಕ್ತವಾಗಿದ್ದು, ಶವದ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಗೆ 34.8 ಮಿ.ಮೀ., ಕುಶಾಲನಗರಕ್ಕೆ 21.0, ಸುಂಟಿಕೊಪ್ಪಕ್ಕೆ 37, ಶನಿವಾರಸಂತೆಗೆ 23.2, ಕೊಡ್ಲಿಪೇಟೆಗೆ 32.4, ಶಾಂತಳ್ಳಿಗೆ 89.4 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.
ಮುಂದುವರೆದ ಕಾರ್ಗತ್ತಲು: ಕಳೆದ 10 ದಿನಗಳಿಂದ ಪ್ರಾರಂಭವಾದ ವಾಯು ವರುಣನಾರ್ಭಟಕ್ಕೆ ಗ್ರಾಮೀಣ ಪ್ರದೇಶ ಅಕ್ಷರಶಃ ಕತ್ತಲಿನಲ್ಲಿ ಮುಳುಗಿವೆ. ತಾಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿರುವ ಹೆಗ್ಗಡಮನೆ, ಕೊತ್ನಳ್ಳಿ, ಬೆಂಕಳ್ಳಿ, ಬೀಕಳ್ಳಿ, ಕುಡಿಗಾಣ, ಹಂಚಿನಳ್ಳಿ, ಬೆಟ್ಟದಳ್ಳಿ, ತಲ್ತರೆ, ತೋಳೂರುಶೆಟ್ಟಳ್ಳಿ, ಶಾಂತಳ್ಳಿ, ಬೆಟ್ಟದಳ್ಳಿ, ಕುಂದಳ್ಳಿ, ಕೂತಿ ಸೇರಿದಂತೆ ಇತರ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದಿರುವ ಪರಿಣಾಮ ವಿದ್ಯುತ್ ಸ್ಥಗಿತಗೊಂಡಿದ್ದು, ಈವರೆಗೆ ಸೆಸ್ಕಾಂ ಸಿಬ್ಬಂದಿಗಳು ಈ ಭಾಗಕ್ಕೆ ವಿದ್ಯುತ್ ಪೂರೈಸುವಲ್ಲಿ ಯಶಸ್ವಿಯಾಗಿಲ್ಲ. ಪಟ್ಟಣದಿಂದ ಗ್ರಾಮೀಣ ಪ್ರದೇಶಕ್ಕೆ ಅಳವಡಿಸಿರುವ ಕಂಬ ಮತ್ತು ಲೈನ್‍ಗಳನ್ನು ದುರಸ್ತಿಗೊಳಿಸಿಕೊಂಡು ಹೋಗುತ್ತಿರುವ ಹಿನ್ನೆಲೆ ಇನ್ನೂ ಕೆಲ ದಿನಗಳು ಈ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿರಲಿದೆ ಎಂದು ಲೈನ್‍ಮೆನ್‍ಗಳು ಮಾಹಿತಿ ನೀಡಿದ್ದಾರೆ.
ಅಲ್ಲಲ್ಲಿ ಹಾನಿ: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾರ್ವತಿ ಎಂಬವರ ವಾಸದ ಮನೆಯ ಮೇಲೆ ಬರೆ ಕುಸಿದಿದ್ದು, ಮನೆಗೆ ಅಪಾಯ ತಂದೊಡ್ಡಿದೆ. ಹರದೂರು ಗ್ರಾ.ಪಂ.ನ ಕುಂಬಾರಬಾಣೆ ಗ್ರಾಮದ ಈಶ್ವರ ಅವರ ಮನೆಯ ಒಂದು ಪಾಶ್ರ್ವ ಭಾಗಶಃ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷೆ ಸುಮಾ, ಸದಸ್ಯ ಗೌತಮ್ ಶಿವಪ್ಪ, ಪಿಡಿಓ ಲೋಕೇಶ್ ಅವರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದೇ ಗ್ರಾ.ಪಂ. ವ್ಯಾಪ್ತಿಯ ಗರಗಂದೂರು ಎ. ಗ್ರಾಮದ ಇಬ್ರಾಹಿಂ ಅವರಿಗೆ ಸೇರಿದ ಮನೆಯ ಹಿಂಭಾಗದ ಗೋಡೆ, ತಡೆಗೋಡೆ ಸಹಿತ ಕುಸಿತಗೊಂಡಿದೆ. ಪಟ್ಟಣದ ಶ್ರೀ ಮುತ್ತಪ್ಪ-ಅಯ್ಯಪ್ಪ ದೇವಾಲಯದ ತಡೆಗೋಡೆ ಕುಸಿದು ಬಿದ್ದಿದೆ. ಕಿಬ್ಬೆಟ್ಟ ಗ್ರಾಮದ ಪ್ರಶಾಂತ್ ಅವರ ಮನೆ ಸಂಪರ್ಕದ ರಸ್ತೆ ತಡೆಗೋಡೆ ಸಹಿತ ಕುಸಿತಕ್ಕೀಡಾಗಿದೆ.
-ವಿಜಯ್ ಹಾನಗಲ್