ಸುಂಟಿಕೊಪ್ಪ, ಆ.11: ಎಡೆಬಿಡದೆ ಸುರಿಯುತ್ತಿರುವ ಮಳೆಯ ಆರ್ಭಟದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂತೆ ದಿನವಾದ ಭಾನುವಾರ ಸುಂಟಿಕೊಪ್ಪ ಸಂತೆ ಮಾರುಕಟ್ಟೆ ಬಿಕೋ ಎನ್ನುತ್ತಿದೆ.

ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಮಧ್ಯಮ ವರ್ಗದವರು ಸುಂಟಿಕೊಪ್ಪ ಸಂತೆಯನ್ನು ಭಾನುವಾರ ದಿನ ಅವಲಂಭಿಸುತ್ತಾರೆ. ಮಹಾಮಳೆ ಸುರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಸಂತೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಸಾಮಗ್ರಿಗಳು ಬಂದಿಳಿದಿತ್ತು. ದರವೂ ಹೆಚ್ಚಾಗಿದ್ದು ಗ್ರಾಹಕರು ಸಹ ಎಂದಿನಂತೆ ಬಾರದೆ ಇದ್ದುದರಿಂದ ವ್ಯಾಪಾರ ವಹಿವಾಟು ಕುಂಠಿತಗೊಂಡಿತು. ಮಳೆಯಿಂದ ತೋಟದಲ್ಲಿ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಮರ ಕೆಲಸದವರಿಗೆ ಕೆಲಸವಿಲ್ಲದೆ ತೊಂದರೆಯಾಗಿದ್ದು, ದಿನಸಿ ಅಂಗಡಿ, ಬ್ರಾಂದಿ ಅಂಗಡಿಗಳಲ್ಲೂ ವ್ಯಾಪಾರ ಕುಂಠಿತವಾಗಿತ್ತು.

-ರಾಜು ರೈ