ಸೋಮವಾರಪೇಟೆ, ಆ. 11: ತಾಲೂಕಿನ ಸರ್ಕಾರಿ ಶಾಲೆಗಳಿಗೆ ಶಿವಮೊಗ್ಗ ಮೂಲದ ಸಂಸ್ಥೆಯಿಂದ ಕ್ರೈಸ್ತ ಮತ ಪ್ರಚಾರದ ಪುಸ್ತಕಗಳು ರವಾನೆಯಾಗಿರುವ ಬಗ್ಗೆ ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆದು, ತಾ.ಪಂ. ಜನಪ್ರತಿನಿಧಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಮುಗಿಬಿದ್ದ ಘಟನೆ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು, ಸರ್ಕಾರಿ ಶಾಲೆಗೆ ಇಂತಹ ಪುಸ್ತಕಗಳನ್ನು ವಿತರಿಸಿರುವ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ? ಮಕ್ಕಳನ್ನು ಮತಾಂತರ ಮಾಡೋಕೆ ಸರ್ಕಾರಿ ಶಾಲೆ ಇರೋದ? ಶಾಲೆಗಳ ಸಂಪೂರ್ಣ ವಿಳಾಸ ಶಿವಮೊಗ್ಗ ದವರಿಗೆ ಹೇಗೆ ಲಭಿಸುತ್ತದೆ? ನಿಮ್ಮ ಇಲಾಖೆಯವರೇ ಇದರಲ್ಲಿ ಶಾಮೀಲಾಗಿದ್ದಾರಾ? ಎಂದು ಪ್ರಶ್ನಿಸಿದರು.

ಈ ಬಗ್ಗೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಅವರು, ‘ಸರ್ಕಾರಿ ಶಾಲೆಗಳಿಗೆ ಬಂದಿರುವ ಪುಸ್ತಕಗಳನ್ನು ಸಿ.ಆರ್.ಪಿ.ಗಳ ಮೂಲಕ ಸಂಗ್ರಹಿಸಲಾಗಿದೆ. ಈ ಬಗ್ಗೆ ಡಿಡಿಪಿಐ ಅವರ ನಿರ್ದೇಶನವನ್ನು ಪಾಲಿಸಲಾಗಿದೆ. ಯಾವದೇ ಪುಸ್ತಕವನ್ನು ಮಕ್ಕಳಿಗೆ ಬೋಧಿಸಿಲ್ಲ; ಗ್ರಂಥಾಲಯ ದಲ್ಲೂ ಇಟ್ಟಿಲ್ಲ’ ಎಂದರು.

ಇದಕ್ಕೆ ತೃಪ್ತರಾಗದ ಮಣಿ ಉತ್ತಪ್ಪ, ಪುಸ್ತಕವನ್ನು ರವಾನಿಸಿದ ಸಂಸ್ಥೆಯ ವಿರುದ್ಧ ದೂರು ನೀಡಲಾಗಿದೆಯೇ? ಈವರೆಗೆ ಯಾಕೆ ದೂರು ನೀಡಿಲ್ಲ; ನಿಮ್ಮ ಇಲಾಖೆಯವರೇ ಈ ಕುತಂತ್ರದಲ್ಲಿ ಕೈ ಜೋಡಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯತ್‍ನಿಂದ ನಿರ್ಣಯ ಆಗಿದ್ದರೂ ಸಹ ಪುಸ್ತಕಗಳು ರವಾನೆಯಾಗುತ್ತಿವೆ, ಶಿಕ್ಷಣ ಇಲಾಖೆ ನಿದ್ರೆ ಮಾಡುತ್ತಿದೆಯೇ? ಕೊಡವ ಭಾಷೆಯಲ್ಲೂ ಬೈಬಲ್ ಬಂದಿದೆ. ಈಗಾಗಲೇ ಹಾಡಿಯಲ್ಲಿ ಮತಾಂತರ ಮಾಡಲಾಗಿದೆ. ನಾವೂ ಸಹ ಎಲ್ಲಾ ಶಾಲೆಗೂ ಭಗವದ್ಗೀತೆ ಕಳಿಸ್ತೀವಿ-ಆಗುತ್ತಾ? ಎಂದು ಜೋರುದನಿಯಲ್ಲಿ ಪ್ರಶ್ನಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಗಳಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ ದೂರು ನೀಡಿದ್ದರೂ, ಇದುವರೆಗೂ ಕ್ರಮ ಕೈಗೊಂಡಿಲ್ಲ. ಈ ಪುಸ್ತಕ ವಿತರಣೆಯ ಹಿಂದೆ ಇರುವವರ ಮತ್ತು ಇದರ ಮೂಲವನ್ನು ಕಂಡು ಹಿಡಿದು, ಅಂತಹವ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮಣಿ ಉತ್ತಪ್ಪ ಒತ್ತಾಯಿಸಿದರು. ಇದಕ್ಕೆ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸಹ ದನಿಗೂಡಿಸಿದರು. ಪುಸ್ತಕಗಳನ್ನು ಹಂಚಿಕೆ ಮಾಡಿರುವ ಸಂಸ್ಥೆಯ ವಿರುದ್ದ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವಂತೆ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಆಗ್ರಹಿಸ ಲಾಯಿತು. ಕೊಡಗಿನಲ್ಲಿ ಸಾಮಾಜಿಕ ಸಾಮರಸ್ಯ ಕದಡಲು ಇಂತಹ ಕುತಂತ್ರವನ್ನು ಹೊರಗಿನವರು ಮಾಡುತ್ತಿದ್ದಾರೆ ಎಂದು ಸದಸ್ಯ ಸತೀಶ್ ಹೇಳಿದರು. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಾಗುವ ಅನಾಹುತಗಳಿಗೆ ಶಿಕ್ಷಣ ಇಲಾಖೆಯೇ ಜವಾಬ್ದಾರಿಕೆಯಾಗುತ್ತದೆ ಎಂದು ಅಭಿಮನ್ಯುಕುಮಾರ್ ಎಚ್ಚರಿಸಿದರು. ಅಂತಿಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬಿಇಓ ದೂರು ನೀಡುವದು, ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳಿಗೆ ತಾ.ಪಂ.ನಿಂದ ದೂರು ಸಲ್ಲಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.