ಭಾಗಮಂಡಲ, ಆ. 11: ಭಾಗಮಂಡಲ ನಾಡಿನ ಜನತೆಗೆ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಆವರಣದಲ್ಲಿ ಮಾರುಕಟ್ಟೆ ನಿರ್ಮಾಣಗೊಂಡಿದ್ದು; ಮುಂದಿನ ತಿಂಗಳು ಲೋಕಾರ್ಪಣಗೊಳ್ಳುತ್ತಿದೆ. ಭಾಗಮಂಡಲ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧೀನದಲ್ಲಿ ಸುಮಾರು ರೂ. 45 ಲಕ್ಷ ವೆಚ್ಚದಲ್ಲಿ ಕೆಳ ಹಂತದ ಕಟ್ಟಡ ನಿರ್ಮಾಣವಾಗಿದೆ. ನಬಾರ್ಡ್ ಬ್ಯಾಂಕಿನಿಂದ ರೂ. 10 ಲಕ್ಷ ದೊರೆತಿದ್ದು ಬ್ಯಾಂಕಿನ ಬಂಡವಾಳ ಸುಮಾರು ರೂ. 35 ಲಕ್ಷ ಬಳಸಿಕೊಂಡು ಕಟ್ಟಡ ನಿರ್ಮಾಣವಾಗಿದೆ.
ಇದರಿಂದಾಗಿ ಗ್ರಾಮೀಣ ಭಾಗದ ಜನತೆ ಬೆಳೆದ ಕೃಷಿ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡಲಾಗುವದು. ಇದರಿಂದ ಬ್ಯಾಂಕಿನೊಂದಿಗೆ ರೈತರು ನಿರಂತರವಾಗಿ ವ್ಯವಹರಿಸಲು ಸಾಧ್ಯವಾಗಲಿದೆ. ಗ್ರಾಮೀಣ ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮಳಿಗೆಯನ್ನು ನಿರ್ಮಿಸಲಾಗಿದೆ. ವ್ಯವಸಾಯ ಸಹಕಾರ ಬ್ಯಾಂಕ್ ತನ್ನದೇ ಆದ ಕಟ್ಟಡವನ್ನು ಭಾಗಮಂಡಲದಲ್ಲಿ ಹೊಂದಿದ್ದು, ಈ ಬಾರಿ ವಾರ್ಷಿಕ ರೂ. 25.18 ಲಕ್ಷ ಆದಾಯ ಲಭಿಸಿದೆ. 113 ವರ್ಷಗಳ ಇತಿಹಾಸದಲ್ಲಿ ಈ ವರ್ಷ ಹೆಚ್ಚಿನ ಲಾಭ ಗಳಿಸಿ ಬ್ಯಾಂಕ್ ಮುಂದುವರಿಯುತ್ತಿದೆ.
ಈ ಹಿಂದಿನ ಸಂಘದ ಕಟ್ಟಡ ನಿರ್ಮಾಣಕ್ಕೆ ನಬಾರ್ಡ್ ಬ್ಯಾಂಕಿನಿಂದ ರೂ. 1 ಕೋಟಿ ಬ್ಯಾಂಕ್ ಸಾಲ ಪಡೆದಿದ್ದು ವ್ಯಾಪಾರ ವಹಿವಾಟಿಗಾಗಿ ರೂ. 50 ಲಕ್ಷ ಪಡೆದಿದ್ದು ಈಗಾಗಲೇ ಈ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗಿದೆ.್ದ ಸದ್ಯ ಯಾವದೇ ಸಾಲ ಇಲ್ಲದೆ ಲಾಭದಾಯಕವಾಗಿ ನಡೆಯುತ್ತಿದೆ. ಬ್ಯಾಂಕಿನ ಕಾರ್ಯಚಟುವಟಿಕೆ ಎಲ್ಲವೂ ಆನ್‍ಲೈನ್ ವ್ಯವಸ್ಥೆಯಲ್ಲಿ ನಡೆಯುತ್ತಿದೆ. ಈ ಬಾರಿ 453 ಜನರು ಕೃಷಿ ಸಾಲ ಪಡೆದಿದ್ದು ಇದರಲ್ಲಿ 124 ಜನರನ್ನು ಹೊರತುಪಡಿಸಿ ಎಲ್ಲರಿಗೂ ಸರ್ಕಾರದ ಸಾಲ ಮನ್ನಾ ಯೋಜನೆ ಲಭಿಸಿದೆ. ಉಳಿದವರಿಗೆ ಸದ್ಯದಲ್ಲಿಯೇ ಹಣ ಮರುಪಾವತಿ ಆಗಲಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ತಿಳಿಸಿದ್ದಾರೆ.
- ಕೆ.ಡಿ. ಸುನಿಲ್