ಮಡಿಕೇರಿ, ಆ. 11: ಮಹಾಮಳೆ, ಪ್ರವಾಹದಿಂದಾಗಿ ಆಸ್ತಿ, ಕೃಷಿ ಫಸಲು ನಷ್ಟಕ್ಕೊಳಗಾದವರಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಲಾಗುತ್ತದೆ. ಈ ಬಗ್ಗೆ ಯಾವದೇ ಆತಂಕ ಅನಗತ್ಯ ಬೇಡ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭರವಸೆ ನೀಡಿದ್ದಾರೆ.ವೀರಾಜಪೇಟೆ ತಾಲೂಕಿನಾ ದ್ಯಂತ ವಿವಿಧ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಕೆ.ಜಿ.ಬೋಪಯ್ಯ ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದರು.

ಯಾರೂ ಊಹಿಸಲಾಗದ ರೀತಿಯಲ್ಲಿ ಮತ್ತೆ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ದುರಂತ ಸಂಭವಿಸಿದೆ. ಈ ದುರಂತವನ್ನು ಮಾನವರಾಗಿ ಹೇಗೆಲ್ಲಾ ಎದುರಿಸ ಬೇಕೋ ಆ ಎಲ್ಲಾ ರೀತಿಯಲ್ಲಿಯೂ ಸರ್ಕಾರದ ಮೂಲಕ ಎದುರಿಸಿ ಮತ್ತಷ್ಟು ಅನಾಹುತಗಳನ್ನು ತಪ್ಪಿಸಿದ್ದೇವೆ. ಈಗಾಗಲೇ 15 ಜನ ಸತ್ತಿದ್ದು ಈ ಪೈಕಿ 8 ಮಂದಿಯ ಶವ ದೊರಕಿದೆ. ತೋರ ಗ್ರಾಮದಲ್ಲಿ ಭೂಕುಸಿತದಿಂದ ಮಣ್ಣಿನಡಿಯಲ್ಲಿರುವ 8 ಮಂದಿಯ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಮಳೆ ಅನಾಹುತದಿಂದ ನಿರಾಶ್ರಿತರಾದವರು ಯಾವದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ಸರ್ಕಾರ ಸಂತ್ರಸ್ತರಿಗೆ ಎಲ್ಲಾ ರೀತಿಯ ಪರ್ಯಾಯ ಜೀವನೋಪಾಯವನ್ನು ಕಲ್ಪಿಸಿಕೊಡಲು ಬದ್ದವಾಗಿದೆ ಎಂದು ಭರವಸೆಯ ನುಡಿಯಾಡಿದರು.ಮಳೆ ಅನಾಹುತದಿಂದ ಮನೆ ಕಳೆದುಕೊಂಡವರಿಗೆ ಸರ್ಕಾರ ಹೊಸ ಮನೆ ನಿರ್ಮಿಸಿಕೊಡಲಿದೆ. ಸರ್ಕಾರ ಮಾತ್ರವಲ್ಲದೇ ವಿವಿಧ ಸಂಘಸಂಸ್ಥೆಗಳೂ(ಮೊದಲ ಪುಟದಿಂದ) ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಮುಂದೆ ಬಂದರೆ ಸರ್ಕಾರ ಅಗತ್ಯ ನೆರವು ನೀಡಲಿದೆ. ತಾವು ಮನೆ ಕಳೆದುಕೊಂಡ ಜಾಗದಲ್ಲಿಯೇ ಸಂತ್ರಸ್ತರು ಬಯಸಿದ್ದೇ ಆದಲ್ಲಿ ಅದು ಸುರಕ್ಷಿತ ಎಂದಾದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತದೆ ಎಂದು ಹೇಳಿದ ಕೆ.ಜಿ. ಬೋಪಯ್ಯ, ಕಳೆದ ವರ್ಷದ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಹಿಂದಿನ ಸರ್ಕಾರ ನಿರ್ಮಾಣ ಮಾಡಿದ್ದ ಮನೆಗಳನ್ನು ಶೀಘ್ರದಲ್ಲಿಯೇ ಹಸ್ತಾಂತರಿಸಲಿದೆ ಎಂದೂ ಹೇಳಿದರು.

ಕಳೆದ ವರ್ಷದ ಪ್ರಾಕೃತಿಕ ವಿಕೋಪ ಸಂದರ್ಭ ಕೊಡಗಿನ ಸಂತ್ರಸ್ತರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿವಿಧೆಡೆಗಳಿಂದ ದಾನಿಗಳು 198 ಕೋಟಿ ರೂ. ಪರಿಹಾರ ರೂಪದಲ್ಲಿ ಆರ್ಥಿಕ ನೆರವು ನೀಡಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘವು 68 ಕೋಟಿ ರೂ. ನೀಡಿತ್ತು. ಈ ಪೈಕಿ ಹಿಂದಿನ ಸರ್ಕಾರವು 98 ಕೋಟಿ ರೂ. ಗಳನ್ನು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ವೆಚ್ಚ ಮಾಡಿದ್ದು, ಪರಿಹಾರ ನಿಧಿಯಲ್ಲಿ ಪ್ರಸ್ತುತ ಬಾಕಿಯಿರುವ 100 ಕೋಟಿ ರೂ.ಗಳನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷಕ್ಕೆ ಸಂಬಂಧಿಸಿದ್ದೂ ಸೇರಿದಂತೆ ಈ ವರ್ಷವೂ ಒಳಗೊಂಡಂತೆ ಕೊಡಗು ಜಿಲ್ಲೆಯಲ್ಲಿ ಕೃಷಿ ಫಸಲು, ಕೃಷಿ ಭೂಮಿ ಹಾನಿಗೊಳಗಾದ ಬೆಳೆಗಾರರಿಗೆ ಯಾವದೇ ನಷ್ಟವಿಲ್ಲದಂತೆ ಸೂಕ್ತ ಪರಿಹಾರ ನೀಡಲು ಕ್ರಮಕೈಗೊಳ್ಳುವದಾಗಿಯೂ ಭರವಸೆ ವ್ಯಕ್ತಪಡಿಸಿದ ಕೆ.ಜಿ. ಬೋಪಯ್ಯ, ಕೊಡಗಿನಲ್ಲಿ ಸಂಭವಿಸಿರುವ ಪ್ರಾಕೃತಿಕ ಹಾನಿಯ ಬಗ್ಗೆ ಪ್ರತಿನಿತ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡುತ್ತಿರುವದಾಗಿ ತಿಳಿಸಿದರಲ್ಲದೇ ಶೀಘ್ರವೇ ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಲಿದ್ದಾರೆ ಎಂದೂ ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ದುರಂತ ಸಂದರ್ಭ ಕೊಡಗಿನಲ್ಲಿ ಚೆಸ್ಕಾಂ, ಬಿ.ಎಸ್.ಎನ್.ಎಲ್., ಅರಣ್ಯ ಇಲಾಖೆಯವರು ನಿರೀಕ್ಷಿತ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೇ ರಜೆ ಮೇಲೆ ತೆರಳಿದ್ದು, ಇರುವ ಅಧಿಕಾರಿಗಳೂ ಸಮರ್ಪಕವಾಗಿ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದೂ ಬೋಪಯ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಚೆಸ್ಕಾಂ ಮತ್ತು ಬಿ.ಎಸ್.ಎನ್.ಎಲ್. ಕೈಕೊಟ್ಟಿರುವದರಿಂದಾಗಿ ಜನತೆಯ ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಯಿತು. ಕೇಂದ್ರ ಸಚಿವ ಸದಾನಂದಗೌಡರು ಬಿ.ಎಸ್‍ಎನ್.ಎಲ್. ಕೇಂದ್ರಗಳಿಗೆ ಡಿಸೇಲ್ ನೀಡುವದಾಗಿ ಹೇಳಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಷ್ಟೊಂದು ನಿರ್ಲಕ್ಷ್ಯ ಅಧಿಕಾರಿಗಳಲ್ಲಿದೆ ಎಂದೂ ಕಿಡಿಕಾರಿದರು.

ವಿವಿಧ ಪರಿಹಾರ ಕೇಂದ್ರಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿದ ಸಂದರ್ಭ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಬಿಜೆಪಿ ಪ್ರಮುಖರಾದ ತಳೂರು ಕಿಶೋರ್‍ಕುಮಾರ್, ಮಧುದೇವಯ್ಯ ವೀರಾಜಪೇಟೆ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಮತ್ತಿತರರು ಹಾಜರಿದ್ದರು.