ಮಡಿಕೇರಿ, ಆ. 11: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಧಾರಾಕಾರ ಮಳೆ-ಗಾಳಿಯಿಂದ ಉಂಟಾಗಿರುವ ಪ್ರಾಕೃತಿಕ ವಿಕೋಪ ಜನತೆಯನ್ನು ಕಂಗೆಡುವಂತೆ ಮಾಡಿದೆ. ಇದೀಗ ಮಳೆ ತುಸು ಇಳಿಮುಖವಾಗುತ್ತಿದ್ದು, ಏರಿಕೆಯಾಗಿರುವ ಪ್ರವಾಹ ಮೆಲ್ಲಮೆಲ್ಲನೆ ಕಡಿಮೆಯಾಗುತ್ತಿ ರುವದು ಆತಂಕಕ್ಕೀಡಾಗಿರುವ ಜನತೆಗೆ ಸಮಾಧಾನ ಮೂಡಿಸುತ್ತಿದೆ. ಆದರೆ, ಅತಿವೃಷ್ಟಿಯ ಪರಿಣಾಮದಿಂದಾಗಿ ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನ ಜನತೆಯ ಮುಂದಿನ ಭವಿಷ್ಯ ಇದೀಗ ಡೋಲಾಯಮಾನವಾಗುತ್ತಿದೆ. ಕೊಡಗು ಜಿಲ್ಲೆಯ ಆರ್ಥಿಕತೆ ಬಹುತೇಕ ಕಾಫಿ ಫಸಲಿನ ಮೇಲೆ ಅವಲಂಭಿತವಾಗಿದೆ. ಕಾಫಿ ಫಸಲಿಗೆ ಧಕ್ಕೆಯಾದಲ್ಲಿ ಇದು ಇಲ್ಲಿನ ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲಾ ವಿಚಾರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವದು ಖಚಿತ.
ವ್ಯಾಪಕ ಮಳೆಯಿಂದಾಗಿ ಹಲವಾರು ಕಡೆಗಳಲ್ಲಿ ಕಾಫಿ ತೋಟಗಳು, ಭತ್ತದ ಗದ್ದೆಗಳು ದಿನಗಟ್ಟಲೆ ಜಲವೃತಗೊಂಡಿವೆ. ಈ ಪ್ರದೇಗಳಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದಿರುವ ಪ್ರದೇಶಗಳಲ್ಲೂ ಇದೀಗ ಕಾಫಿ ಗಿಡಗಳಲ್ಲಿ ಕಾಯಿ ಕಟ್ಟುತ್ತಿರುವ ಕಾಫಿ ಫಸಲು ನೆಲಕಚ್ಚುತ್ತಿವೆ.
ತೋಟಗಳಲ್ಲಿ ಕಾಫಿ ಉದುರುವಿಕೆ ಹೆಚ್ಚಾಗುತ್ತಿದ್ದು, ಗಿಡದಲ್ಲಿರಬೇಕಾದ ಕಾಫಿ ಭಾರೀ ಮಳೆಯಿಂದಾಗಿ ನೆಲಕಚ್ಚುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇದನ್ನು ಗಮನಿಸಿದರೆ ಮುಂದಿನ ಸಾಲಿನಲ್ಲಿ ಜನತೆಯ ಬದುಕು ಇನ್ನಷ್ಟು ದುಸ್ತರವಾಗಲಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಬರುವ ಕಂಡಂಗಾಲ, ಮರೋಡಿ ಗ್ರಾಮದ ಬೆಳೆಗಾರ ಚಂದೂರ ಎಸ್. ಬಾಬಿ ಅವರು ತಮ್ಮ ತೋಟದಲ್ಲಿ ಉದುರುತ್ತಿರುವ ಕಾಫಿ ಫಸಲಿನ ಚಿತ್ರವನ್ನು ‘ಶಕ್ತಿ’ಗೆ ನೀಡಿದ್ದು, ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.