ಗೋಣಿಕೊಪ್ಪ ವರದಿ ಆ,11: ನಿಟ್ಟೂರು-ಕಾರ್ಮಾಡು ಗಿರಿಜನ ಆಶ್ರಮ ಶಾಲೆಯಲ್ಲಿ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದಕ್ಕೆ ವಿರೋಧ ವ್ಯಕ್ತಪಡಿಸಿದ ಐಟಿಡಿಪಿ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ನವೀನ್ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಅಲ್ಲಿನ ಗಿರಿಜನ ಆಶ್ರಮ ಶಾಲೆಯಲ್ಲಿ ನಿರಾಶ್ರಿತರಿಗೆ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದ ವ್ಯವಸ್ಥಾಪಕ ನವೀನ್, ಮಾಹಿತಿ ನೀಡದೆ ಪರಿಹಾರ ಕೇಂದ್ರ ತೆರೆದಿರುವ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲ್ಲಿನ ಸಿಬ್ಬಂದಿ ವಿರುದ್ದ ಕಿಡಿಕಾರಿದನ್ನು ಖಂಡಿಸಿದ ಸ್ಥಳೀಯರು, ಜಿಲ್ಲಾಧಿಕಾರಿ ಕೇಂದ್ರವನ್ನು ತೆರೆಯಲು ಅವಕಾಶ ನೀಡಿದ್ದಾರೆ. ಹೀಗಿರುವಾಗ ಐಟಿಡಿಪಿ ಅಪ್ಪಣೆ ಬೇಕಿಲ್ಲ. ಗ್ರಾಮದಲ್ಲಿನ 98 ನಿರಾಶ್ರಿತರಿಗೆ ಆಶ್ರಯ ನೀಡಿದ್ದೇವೆ. ನಿಟ್ಟೂರು ಸೇತುವೆ ಸಂಪರ್ಕವಿಲ್ಲದೆ ತೊಂದರೆಯ ನಡುವೆಯೂ ಮಾನವೀಯತೆಯಿಂದ ನಾವು ತೊಡಗಿಕೊಂಡಿದ್ದೇವೆ ಎಂದು ತಿರುಗೇಟು ನೀಡಿದರು. ಅಧಿಕಾರಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪವನ್ ಚಿಟ್ಯಪ್ಪ, ಸ್ಥಳೀಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಕೊಟ್ಟಂಗಡ ಮಂಜುನಾಥ್, ಗಿರಿಜನ ಮುಖಂಡರಾದ ದಾಸಪ್ಪ, ಕೆಂಚಪ್ಪ ಇದ್ದರು. -ಸುದ್ದಿಪುತ್ರ