ಕೂಡಿಗೆ, ಆ. 11: ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಕೈಮಗ್ಗದ ನೇಕಾರರಿಗೆ ವಿವಿಧ ಸವಲತ್ತುಗಳು ಇದ್ದು, ನೇಕಾರರು ಕೈಮಗ್ಗ ತರಬೇತಿ ಪಡೆದು ಬಟ್ಟೆಗಳನ್ನು ನೇಯ್ಯುವಲ್ಲಿ ಮುಂದಾಗಬೇಕು. ನಿರುದ್ಯೋಗ ಯುವಕ-ಯುವತಿಯರಿಗೂ ಸಹ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ನೇಯ್ಗೆ ವೃತ್ತಿಯಡಿ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುವದು. ಇದನ್ನು ಸದುಪಯೋಗಪಡಿಸಿಕೊಂಡು ಸ್ವ-ಉದ್ಯೋಗವನ್ನು ಮಾಡಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಹೇಳಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ಶಿರಂಗಾಲದ ಕಾವೇರಿ ಕೈಮಗ್ಗ ಕೇಂದ್ರದಲ್ಲಿ ಆಯೋಜಿಸಿದ್ದ 5ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯುತ್ ಮಗ್ಗಗಳ ಪೈಪೋಟಿಯಲ್ಲಿ ಜಿಲ್ಲೆಯಲ್ಲಿ ಏಕೈಕ ಕೈಮಗ್ಗವಾಗಿರುವ ಕಾವೇರಿ ಕೈಮಗ್ಗ ಕೇಂದ್ರವನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುವದಾಗಿ ಈ ಸಂದರ್ಭ ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಸದಸ್ಯ ಜಯಣ್ಣ ಮಾತನಾಡಿ, ಶಿರಂಗಾಲ ದಲ್ಲಿರುವ ಕೈಮಗ್ಗ ಕೇಂದ್ರಕ್ಕೆ ತನ್ನದೇ ಆದ ಇತಿಹಾಸ ಇರುವದರಿಂದ ಈ ಕೇಂದ್ರದಲ್ಲಿ ಉತ್ಪಾದನೆಗೊಳ್ಳುವ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ನಡೆದಲ್ಲಿ ತರಬೇತಿ ಪಡೆದಿರುವ ಇನ್ನು ಹೆಚ್ಚಿನ ಮಹಿಳೆಯರು ಮತ್ತು ಯುವಕರು ಈ ಕೈಮಗ್ಗ ಕೇಂದ್ರಕ್ಕೆ ಸೇರ್ಪಡೆಗೊಳ್ಳಲು ಅವಕಾಶವಾಗುತ್ತದೆ ಎಂದರು.
ಕೊಡಗು ಜಿಲ್ಲಾ ನೇಕಾರರ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಕೆ. ಪಾಂಡುರಂಗ ಮಾತನಾಡಿ, ನೇಕಾರ ಅಭಿವೃದ್ಧಿಗೆಂದು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಸೌಲಭ್ಯಗಳನ್ನು ಇಲಾಖೆಯ ವತಿಯಿಂದ ನೀಡಲಾಗಿದೆ. ಆದರೆ, ಇಲಾಖೆಯ ನಿಯಮಾನುಸಾರ ಸಾಲ ನೀಡಿದ್ದರೂ ನೇಕಾರರಿಗೆ ಶೇ. 12 ರಷ್ಟು ಬಡ್ಡಿಯಲ್ಲಿ ಸಾಲ ನೀಡುತ್ತಿರುವದು ನೇಕಾರರಿಗೆ ಅನ್ಯಾಯವಾಗುತ್ತಿದೆ. ಇದರ ಬಗ್ಗೆ ಇಲಾಖೆಯು ಗಮನಹರಿಸಿ, ನೇಕಾರರಿಗೆ ಸ್ವಂತ ಹೊಸ ಕೈಮಗ್ಗ ಘಟಕಗಳನ್ನು ಸ್ಥಾಪಿಸಿಕೊಂಡು ಸ್ವ-ಉದ್ಯೋಗಿಗಳಾಗಲು ಸಹಕರಿಸಬೇಕಿದೆ ಎಂದರು.
ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ವಹಿಸಿ, ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಶಿರಂಗಾಲ ಗ್ರಾಮ ದೇವತಾ ಸಮಿತಿಯ ಅಧ್ಯಕ್ಷ ಎಸ್.ಸಿ. ರುದ್ರಪ್ಪ, ಶಿರಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಗೋಣಿಕೊಪ್ಪಲು ಸಿದ್ಧ ಉಡುಪು ಘಟಕದ ವ್ಯವಸ್ಥಾಪಕ ದೇವ್ ಕುಮಾರ್, ಶಿರಂಗಾಲ ಕೈಮಗ್ಗ ಘಟಕದ ಮೇಲ್ವಿಚಾರಕ ಮೋಹನ್ ಇದ್ದರು.
ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸ ಲಾಯಿತು. ಈ ಸಂದರ್ಭ ಕಳೆದ 30 ವರ್ಷಗಳಿಂದ ನೇಯ್ಗೆ ಕೇಂದ್ರದಲ್ಲಿ ನೇಯ್ಗೆಯಲ್ಲಿ ತೊಡಗಿಸಿಕೊಂಡಿದ್ದ ಅಣ್ಣಯ್ಯ ಶೆಟ್ಟಿ, ಗೌರಮ್ಮ, ಮಂಜುಳಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಗುರುಸ್ವಾಮಿ, ಮೋಹನ್ ನಿರ್ವಹಿಸಿದರು.