ವೀರಾಜಪೇಟೆ, ಆ. 11: ಆಶ್ಲೇಷ ಮಳೆಯ ಆರ್ಭಟ ಕಡಿಮೆಯಾಗಿದ್ದು ಬೇತರಿಯ ಕಾವೇರಿ ನದಿಯಲ್ಲಿ ಪ್ರವಾಹ ನಿಧಾನವಾಗಿ ಇಳಿಮುಖವಾಗುತ್ತಿದೆ. ವೀರಾಜಪೇಟೆ ಕದನೂರು ರಸ್ತೆ ಸಂಚಾರ ಪ್ರಾರಂಭಗೊಂಡಿದೆ.

ಭೂಕುಸಿತ ಉಂಟಾದ ತೋರ, ಹೆಗ್ಗಳ ಬೂದಿಮಾಳ ಗ್ರಾಮದ 293 ಗ್ರಾಮಸ್ಥರು ಹೆಗ್ಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪ್ರಾರಂಭಗೊಂಡ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಪಟ್ಟಣದ ನೆಹರು ನಗರ, ಅಯ್ಯಪ್ಪಬೆಟ್ಟ, ಮಲೆತೆರಿಕೆ ಬೆಟ್ಟದ 230 ಜನರು ಚಿಕ್ಕಪೇಟೆ ಬಳಿ ಇರುವ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ತಾಲೂಕು ಆಡಳಿತ ಮತ್ತು ವಿವಿಧ ಸಂಘ ಸಂಸ್ಥೆಗಳು ಊಟ, ಬಟ್ಟೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದೆ. ಪರಿಹಾರ ಕೇಂದ್ರದಲ್ಲಿರುವ ಮಕ್ಕಳಿಗೆ ಅಲ್ಲಿಯೆ ಶಿಕ್ಷಣವನ್ನು ನೀಡಲಾಗುತ್ತಿದೆ. ತಹಶೀಲ್ದಾರ್ ಪುರಂದರ ಭೇಟಿ ನೀಡಿ ನಿರಾಶ್ರಿತರಿಗೆ ಯಾವದೇ ತೊಂದರೆ ಆಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿರುವದಾಗಿ ತಿಳಿಸಿದ್ದಾರೆ.

ತೋರದಲ್ಲಿ ಕಣ್ಮರೆಯಾಗಿರುವವರಿಗಾಗಿ ಶೋಧಕಾರ್ಯ ಮುಂದುವರೆದಿದ್ದು, ಇದುವರೆಗೆ ಯಾವ ಸುಳಿವು ಲಭಿಸಿಲ್ಲವೆಂದು ತಹಶೀಲ್ದಾರ್ ಪುರಂದರ ತಿಳಿಸಿದ್ದಾರೆ. ಡಿವೈಎಸ್ಪಿ ಕೆ.ಎಸ್. ಸುಂದರ್‍ರಾಜ್ ಸೇರಿದಂತೆ ಪೊಲೀಸ್ ಇಲಾಖೆ, ಎನ್.ಡಿ.ಆರ್.ಎಫ್. ಮಿಲಿಟರಿ, ಗೃಹರಕ್ಷಕ ಸಿಬ್ಬಂದಿ, ಅಗ್ನಿಶಾಮಕ ದಳ ಇಂದು ಕೂಡ ಸಂಜೆ 6 ಗಂಟೆ ತನಕ ಹುಡುಕಾಟ ನಡೆಸಿದ್ದು, ಜಂಟಿ ಕಾರ್ಯಾಚರಣೆಯಲ್ಲಿ ನಾಗರಿಕರು ಕೈಜೋಡಿಸಿದ್ದರು.

ಈ ವೇಳೆ ಸತ್ತುಹೋಗಿರುವ ಒಂದು ಹಂದಿ ಹಾಗೂ ಗೃಹೋಪಯೋಗಿ ಪಾತ್ರೆಯೊಂದು ಪತ್ತೆಯಾಗಿದೆ. ಸಂಜೆ ಘಟನೆ ಸ್ಥಳಕ್ಕೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಭೇಟಿ ನೀಡಿದ್ದರು. ಮಧುದೇವಯ್ಯ ಸೇರಿದಂತೆ ಗ್ರಾ.ಪಂ.ಸದಸ್ಯರು, ಇತರರು ಹಾಜರಿದ್ದರು.

-ಡಿ.ಎಂ.ಆರ್./ ಕೆ.ಕೆ.ಎನ್.